ಕೊರೊನಾ ಸಂಕಷ್ಟದ ಸಂದರ್ಭದಲ್ಲೇ ಏರ್ ಟೆಲ್, ವೊಡಾಫೋನ್ – ಐಡಿಯಾ ಬಳಕೆದಾರರಿಗೆ ದೊಡ್ಡ ಶಾಕ್ ಕಾದಿದೆ. ಮೂಲಗಳ ಪ್ರಕಾರ ಮುಂದಿನ ತಿಂಗಳಿನಿಂದ ಪ್ರಿ ಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಬಳಕೆದಾರರ ಡೇಟಾ ಹಾಗೂ ಕರೆ ದರಗಳು ಶೇ.10 ರಷ್ಟು ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಈ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎ.ಜಿ.ಆರ್.) ಬೃಹತ್ ಮೊತ್ತದ ಹಣವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಇದನ್ನು ಸರಿದೂಗಿಸುವ ಸಲುವಾಗಿ ಭಾರತಿ ಏರ್ಟೆಲ್ ಹಾಗೂ ವೊಡಾಫೋನ್ – ಐಡಿಯಾ ಕಂಪನಿಗಳು ಈ ತೀರ್ಮಾನ ಕೈಗೊಂಡಿವೆ ಎನ್ನಲಾಗಿದೆ.
ಈ ತೀರ್ಪನ್ನು ಮರು ಪರಿಶೀಲಿಸುವಂತೆ ಬಾಕಿ ಉಳಿಸಿಕೊಂಡಿರುವ ಟೆಲಿಕಾಂ ಕಂಪನಿಗಳು ನ್ಯಾಯಾಲಯಕ್ಕೆ ಮನವಿ ಮಾಡಿವೆಯಾದರೂ ಇದಕ್ಕೆ ಸ್ಪಂದನೆ ಸಿಗುವ ಯಾವುದೇ ವಿಶ್ವಾಸವಿಲ್ಲ. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಶೇ.10 ರಷ್ಟು ದರ ಏರಿಕೆ ಮಾಡುವ ಮೂಲಕ ಇದರಿಂದಾಗುವ ನಷ್ಟವನ್ನು ಸರಿದೂಗಿಸುವ ಲೆಕ್ಕಾಚಾರವನ್ನು ಟೆಲಿಕಾಂ ಕಂಪನಿಗಳು ಹೊಂದಿವೆ.
ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಪ್ರವೇಶದ ನಂತರ ಕಂಪನಿಗಳ ನಡುವೆ ದರ ಸಮರ ಏರ್ಪಟ್ಟಿದ್ದು, ಹೀಗಾಗಿ ಭಾರತೀಯ ಗ್ರಾಹಕರು ಅತ್ಯಂತ ಕಡಿಮೆ ದರದಲ್ಲಿ ಅಂದರೆ 3 ರೂಪಾಯಿಗೆ 1ಜಿಬಿ ಡೇಟಾ ಪಡೆಯುತ್ತಿದ್ದರು. ಇದರಿಂದಾಗಿ ಟೆಲಿಕಾಂ ಕಂಪನಿಗಳು ತೀವ್ರ ನಷ್ಟ ಅನುಭವಿಸಿದ್ದವು. ಇದಾದ ಬಳಿಕ 2019 ರಲ್ಲಿ ಶೇ.10 ರಿಂದ ಶೇ.40 ರವರೆಗೆ ಆಯ್ದ ಪ್ಲಾನ್ ಗಳ ಮೇಲೆ ಕರೆ ಮತ್ತು ಡೇಟಾ ದರಗಳನ್ನು ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಈ ಕಾರ್ಯಕ್ಕೆ ಕಂಪನಿಗಳು ಮುಂದಾಗಿವೆ.
ಆದರೆ ಈ ವಿಚಾರವನ್ನು ವೊಡಾಫೋನ್ – ಐಡಿಯಾ ವಕ್ತಾರರು ತಳ್ಳಿ ಹಾಕಿದ್ದು, ವರದಿ ಆಧಾರ ರಹಿತ ಎಂದು ಹೇಳಿದ್ದಾರೆ. ಭಾರತಿ ಏರ್ಟೆಲ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಹಿಂದೆಯೂ ದರ ಏರಿಕೆ ವಿಚಾರವನ್ನು ತಳ್ಳಿ ಹಾಕಿದ್ದ ಕಂಪನಿಗಳು ಬಳಿಕ ಗ್ರಾಹಕರಿಗೆ ಬರೆ ಎಳೆದಿದ್ದವು. ಈಗಲೂ ಅದೇ ಕಾರ್ಯವಾಗಲಿದೆ ಎಂದು ಹೇಳಲಾಗಿದೆ.