ನೇಪಾಳದ ಸಿಂಧು ಚೌಕ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. 21 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತವಾದ ಪ್ರದೇಶದಲ್ಲಿ ಶೋಧ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಿಂಧು ಚೌಕ್ ಜಿಲ್ಲೆಯ ಜುಗಲ್ ಗ್ರಾಮೀಣ ಪುರಸಭೆ ವ್ಯಾಪ್ತಿಯಲ್ಲಿ ಸಂಭವಿಸಿದ ಭೂಕುಸಿತದಿಂದ ಲಿಡಿ ಗ್ರಾಮದಲ್ಲಿ 37 ಮನೆಗಳಿಗೆ ಹಾನಿಯಾಗಿದೆ.
ಬಲಿಯಾದ 18 ಜನರಲ್ಲಿ 11 ಮಕ್ಕಳು, ನಾಲ್ವರು ಮಹಿಳೆಯರು ಮತ್ತು ಮೂವರು ಪುರುಷರು ಇದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಜ್ವಲ್ ಮಹಾರ್ಜನ್ ತಿಳಿಸಿದ್ದಾರೆ. ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ 150 ಭದ್ರತಾ ಸಿಬ್ಬಂದಿ ತಂಡದಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಚಿವರು ಮತ್ತು ಹಿರಿಯ ಅಧಿಕಾರಿಗಳು ಪ್ರದೇಶದ ಪರಿಸ್ಥಿತಿಯನ್ನು ನಿರ್ವಹಿಸಲು ಆಗಮಿಸುತ್ತಿದ್ದಾರೆ.