ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಾ ಗಾಂಧಿ ಅವರ ಅತಿ ದೊಡ್ಡ ಚಿತ್ರವನ್ನು ರಚಿಸುವ ಮೂಲಕ ಚೆನ್ನೈ ಮೂಲದ ಕಲಾವಿದ ಶಿವರಾಮನ್ ಗಿನ್ನೆಸ್ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ.
ನಗರದ ಗಿಂಡಿ ಪ್ರದೇಶದಲ್ಲಿರುವ ಹಿಂದೂಸ್ತಾನ್ ಅಂತಾರಾಷ್ಟ್ರೀಯ ಶಾಲೆಯ ಕಲಾ ವಿಭಾಗದ ಶಿವ, ಕಾಫಿ ಪುಡಿ ಬಳಸಿಕೊಂಡು 185.8 ಚದರ ಮೀಟರ್ ವಿಸ್ತಾರದ ಈ ಚಿತ್ರದ ಮೂಲಕ ಜನರಲ್ಲಿ ದೇಶಭಕ್ತಿ ಮೂಡಿಸುವ ಯತ್ನ ಮಾಡಿದ್ದಾರೆ.
ಆಗಸ್ಟ್ 14ರ ಬೆಳಿಗ್ಗೆ 6-00 ಗಂಟೆಗೆ ತಮ್ಮ ಈ ಕೆಲಸ ಆರಂಭಿಸಿದ ಶಿವರಾಮನ್, 24 ಗಂಟೆಗಳ ಬಳಿಕ, ಆಗಸ್ಟ್ 15ರ ಬೆಳಿಗ್ಗೆ 6-00ಕ್ಕೆಲ್ಲಾ ಈ ಕಲಾಕೃತಿಯನ್ನು ಮಾಡಿ ಮುಗಿಸಿದ್ದಾರೆ. ತಮ್ಮ ಶಾಲೆಯ ಪ್ರಾಂಗಣದಲ್ಲಿ ಈ ಕಲಾಕೃತಿ ರಚಿಸಿದ್ದಾರೆ ಶಿವ.