ಬೆಂಗಳೂರು: ಕೊರೋನಾ ಕಾರಣದಿಂದ ಈ ಬಾರಿ ಸೀಮಿತ ಗಣೇಶೋತ್ಸವಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಸರಳವಾಗಿ ಹಬ್ಬ ಆಚರಿಸಲು ಮಾರ್ಗಸೂಚಿ ಬಿಡುಗಡೆಮಾಡಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಸ್ಥಾಪನೆ, ಮೆರವಣಿಗೆ ನಿಷೇಧಿಸಲಾಗಿದೆ. ಅದೇ ರೀತಿ ರಸ್ತೆಯಲ್ಲಿ ಓಣಿ, ಮೈದಾನದಲ್ಲಿಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಣೆ ಮತ್ತು ಮೆರವಣಿಗೆ ನಡೆಸುವುದನ್ನು ನಿರ್ಬಂಧಿಸಲಾಗಿದೆ.
ಮನೆಯಲ್ಲಿ, ದೇವಾಲಯಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಬಹುದು. ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಮಾರ್ಗಸೂಚಿ ಹೊರಡಿಸಲಾಗಿದೆ. ನಿರ್ಬಂಧ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.
ದೇವಾಲಯ ಇಲ್ಲವೇ ಮನೆಯಲ್ಲಿ ಸರಳವಾಗಿ ಹಬ್ಬ ಆಚರಿಸಬಹುದು. ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಗಣೇಶಮೂರ್ತಿ ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ನಡೆಸುವಂತಿಲ್ಲ. ದರ್ಶನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ.