ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಉಂಟಾಗಿದ್ದ ಗಂಡಾಂತರ ದೂರವಾಗಿದೆ. ಬಂಡಾಯ ಸಾರಿದ್ದ ಸಚಿನ್ ಪೈಲಟ್ ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಮುಖ್ಯಮಂತ್ರಿ ಕುರ್ಚಿಯಿಂದ ದೂರವೇ ಕುಳಿತಿದ್ದ ಸಚಿನ್ ಪೈಲಟ್ ಯೋಧನಾಗಿ ಸರ್ಕಾರವನ್ನು ರಕ್ಷಿಸುತ್ತೇನೆ. ನಾನು ಪ್ರಬಲ ಯೋಧನಾಗಿದ್ದೇನೆ. ಸರ್ಕಾರ ರಕ್ಷಣೆಗೆ ಗೋಡೆಯಂತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತ ಯಾಚಿಸಿ ಶಾಸಕರ ವಿಶ್ವಾಸವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಜನ ಬೆಂಬಲದೊಂದಿಗೆ ರಚನೆಯಾದ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸಿದೆ. ಐಟಿ, ಸಿಬಿಐ, ಇಡಿ ದುರ್ಬಳಕೆ ಮಾಡಿಕೊಂಡು ಎದುರಾಳಿಗಳನ್ನು ಮಣಿಸಲು ಪ್ರಯತ್ನಿಸಿದೆ ಎಂದು ದೂರಿದ್ದಾರೆ.
ಸಂಸದೀಯ ವ್ಯವಹಾರ ಸಚಿವ ಶಾಂತಿ ಧರಿವಾಲ್, ಬಿಜೆಪಿ ವಿರುದ್ಧ ಹರಿಹಾಯ್ದು ಕುದುರೆ ವ್ಯಾಪಾರದ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಯಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಪರವಾಗಿ 125 ಶಾಸಕರು ಮತಚಲಾಯಿಸಿದ್ದಾರೆನ್ನಲಾಗಿದೆ.