ಮಂಡ್ಯ: ಶಾಲೆ ಆರಂಭಕ್ಕಿಂತ ಮಕ್ಕಳ ಆರೋಗ್ಯಕ್ಕೆ ಆದ್ಯತೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣೆ ಸಮಿತಿ ರಾಜ್ಯ ಘಟಕದ ವತಿಯಿಂದ ಮಂಡ್ಯದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲೆಗಳನ್ನು ಆರಂಭಿಸುವುದಕ್ಕಿಂತ ಮಕ್ಕಳ ಆರೋಗ್ಯ ಮತ್ತು ಅವರ ಕಲಿಕೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ನಡುವೆಯೂ ಶಾಲೆಗಳನ್ನು ಆರಂಭಿಸಲು ಸುರೇಶ್ ಕುಮಾರ್ ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ, ಶೈಕ್ಷಣಿಕ ವರ್ಷವನ್ನು ಹೇಗೆ ಆರಂಭಿಸಬೇಕೆಂಬ ಸವಾಲು ನಮ್ಮ ಮುಂದಿದೆ. ಕೊರೋನಾ ಅವಧಿಯಲ್ಲಿ ಮಕ್ಕಳಿಗೆ ಗುಣಮಟ್ಟದ ನೀಡುವುದು ಮುಖ್ಯ ಉದ್ದೇಶವಾಗಿದೆ. ಮಕ್ಕಳು ಶಾಲೆಯ ಸಂಪರ್ಕದಲ್ಲಿರಲು ವಿದ್ಯಾಗಮ ಯೋಜನೆ ಜಾರಿಗೆ ತರಲಾಗಿದೆ. ಇದರೊಂದಿಗೆ ಶಿಕ್ಷಣ ಇಲಾಖೆಯಿಂದ ಶೀಘ್ರದಲ್ಲಿ ಎರಡು ಚಾನೆಲ್ ಆರಂಭಿಸಿ ಎಲ್ಲಾ ತರಗತಿಗಳ ಮಕ್ಕಳಿಗೆ ಪಾಠ ಬೋಧಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.