ಕೋಲಾರ: ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯಾದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವುದು, ಮೆರವಣಿಗೆ ವಿಸರ್ಜನೆ ಮಾಡುವುದನ್ನು ನಿಷೇದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದ್ದಾರೆ.
ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣಗಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತಾನಾಡಿದ ಅವರು, ಪರಿಸರ ಹಾನಿಕಾರಕ ಪಿಓಪಿ ಗಣಪತಿ ವಿಗ್ರಹಗಳ ಮಾರಾಟ ಮತ್ತು ಬಳಕೆಯನ್ನು ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ. ಇದರ ಬದಲಾಗಿ ಸಗಣಿಯಿಂದ ಗೋದಿ ಅಥವಾ ರಾಗಿ ಹಿಟ್ಟಿಗೆ ಅರಿಶಿನ ಸೇರಿಸಿ ತಯಾರಿಸಿದ ಗಣಪತಿ ಮೂರ್ತಿಗಳನ್ನು ತಮ್ಮ ಮನೆಗಳಲ್ಲಿ ಮಾತ್ರ ಬಳಸಿ, ಪೂಜಿಸಬೇಕು. ಅರಿಶಿಣದ ಬಳಕೆಯಿಂದ ರೋಗ ನಿರೋದಕ ಶಕ್ತಿಯು ಹೆಚ್ಚುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಆಗದೆ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದರಿಂದ ಪರಿಸರಕ್ಕೆ ಅಪಾರ ಕೊಡುಗೆ ನೀಡಿದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ, ಧ್ವನಿವರ್ಧಕ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಮನೆಗಳಲ್ಲಿಯೋ ಗಣೇಶ ಪ್ರತಿಷ್ಠಾಪಿಸಿ ಆರಾಧಿಸಬಹುದಾಗಿದೆ. ಸಾರ್ವಜನಿಕ ಕೆರೆ, ಬಾವಿಗಳಲ್ಲಿ ಈ ಬಾರಿ ಗಣೇಶ ವಿಸರ್ಜನೆಗೆ ಅವಕಾಶ ಇರುವುದಿಲ್ಲ. ತಮ್ಮ ತಮ್ಮ ಮನೆಗಳಲ್ಲಿಯೇ ನೀರಿನ ಬಕೆಟ್, ಪಾತ್ರೆಗಳಲ್ಲಿ ವಿಸರ್ಜನೆ ಮಾಡಬೇಕು. ಗಣೇಶ ಹಬ್ಬವನ್ನು ಎಲ್ಲರೂ ಸರಳವಾಗಿ ಮತ್ತು ಕುಟುಂಬಕ್ಕೆ ಸೀಮಿತಗೊಳಿಸಿ ನಮ್ಮ-ನಮ್ಮ ಮನೆಗಳಲ್ಲಿಯೊ ಆಚರಿಸೋಣ. ಶಾಂತಿ, ಸೌಹರ್ದತೆಯಿಂದ ಹಬ್ಬ ಆಚರಿಸಿ, ಮಾದರಿಯಾಗೋಣ ಎಂದು ಹೇಳಿದ್ದಾರೆ.
ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲದಿರುವುದರಿಂದ ಡಿಜೆ ಅಥವಾ ಮೈಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಬಳಕೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಗಣೇಶ ಹಬ್ಬವನ್ನು ಆಚರಿಸಬೇಕು ಎಂದ ಅವರು, ಪಿಓಪಿ ಗಣೇಶ ಮೂರ್ತಿಗಳ ಸಂಗ್ರಹ ಅಥವಾ ಮಾರಾಟ ಮಾಡುವುದು ಕಂಡು ಬಂದರೆ ಪೋಲಿಸ್ ಸಹಾಯವಾಣಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿತ್ತಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟನ್ ಐಪೋನ್ ತಯಾರಿಕಾ ಕಂಪನಿಗೆ 43 ಎಕರೆ ಜಮೀನು ಮಂಜೂರಾಗಿರುತ್ತದೆ. ಇನ್ನು 5 ಎಕರೆ ಜಮೀನಿಗಾಗಿ KIADB ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. 687 ಕೋಟಿ ರೂ ವೆಚ್ಚದಲ್ಲಿ ಕಂಪನಿಯು ಆರಂಭವಾಗುತ್ತಿದ್ದು, ಸುಮಾರು 10 ಸಾವಿರ ಜನಕ್ಕೆ ಉದ್ಯೋಗವಾಕಾಶ ದೊರೆಯಲಿದೆ. ಇದರಲ್ಲಿ ಶೇ 92 ರಷ್ಟ ಉದ್ಯೋಗವಾಕಾಶಗಳು ಸ್ಥಳೀಯರಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪ್ರಾದೇಶಿಕ ಕಛೇರಿಯ ಜಿಲ್ಲಾ ಪರಿಸರ ಅಧಿಕಾರಿ ವಾಸುದೇವ ಎಸ್.ಕೆ., ಡಿವೈಎಸ್ಪಿ ಚೌಡಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.