ಇಡೀ ಜಗತ್ತು ಆಗಸ್ಟ್ 12ನ್ನು ವಿಶ್ವ ಆನೆಗಳ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಕಾಡಾನೆಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.
ಇದರ ಹಿನ್ನೆಲೆಯಲ್ಲಿ ನೆಟ್ಟಿಗರು ಆನೆಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದು, #ಹಾಥಿಹಮಾರಸಾಥಿ ಎಂಬ ಹ್ಯಾಷ್ ಟ್ಯಾಗ್ ಮಾಡಿದ ಸಾಕಷ್ಟು ಪೋಸ್ಟ್ ಗಳು ಹರಿದಾಡಿವೆ.
ಈ ಪೈಕಿ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿನ ನೀಡಲ್ ಹೋಲ್ ಪಾಯಿಂಟ್ ಅಥವಾ ಆನೆ ತಲೆಯ ಪಾಯಿಂಟ್ ಫೋಟೋ ವೈರಲ್ ಆಗಿದ್ದು, ಬೆಟ್ಟ ಸಾಲುಗಳ ನಡುವೆ ಕಾಣುವ ಎರಡು ಬಂಡೆಗಳ ಮಧ್ಯದ ರಂಧ್ರವು ನೋಡಲು ಸಲಗವೊಂದರ ಸೊಂಡಿಲಿನಂತೆ ಕಾಣುತ್ತದೆ. ಪ್ರಾಕೃತಿಕವಾಗಿರುವ ಈ ಚಿತ್ರ ಎಲ್ಲರನ್ನು ಸೆಳೆಯುವಂತೆ ಮಾಡಿದೆ.
ಇನ್ನೊಂದೆಡೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ಸಂದೇಶ ಇರುವ ವಿಡಿಯೋ ಕೂಡ ವೈರಲ್ ಆಗಿದ್ದು, ಭಾರತ ದೇಶವೊಂದರಲ್ಲೇ ಏಷ್ಯಾದ ಶೇ.60 ರಷ್ಟು ಕಾಡಾನೆಗಳಿವೆ. 14 ರಾಜ್ಯಗಳ 65000 ಚದರ ಕಿ.ಮೀ. ವ್ಯಾಪ್ತಿಯಲ್ಲಿ 30 ಆನೆ ಸಂರಕ್ಷಿತ ಪ್ರದೇಶವಿದೆ. ವನ್ಯಜೀವಿ ಕಾನೂನು ಮಾತ್ರದಿಂದ ಇವೆಲ್ಲ ಉಳಿದಿಲ್ಲ. ಬದಲಿಗೆ ಪ್ರಾಣಿಗಳ ಬಗ್ಗೆ ಭಾರತೀಯರಲ್ಲಿನ ಪ್ರೀತಿ, ಕಾಳಜಿ, ಪೂಜನೀಯ ಭಾವವೂ ಕಾರಣ. ಇದು ಹೀಗೇ ಮುಂದುವರಿಯಲಿ ಎಂದು ಕರೆ ನೀಡಿದ್ದಾರೆ.