ಬೆಂಗಳೂರು: ರಾಜ್ಯ ಇ- ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಮಹತ್ವಕಾಂಕ್ಷೆಯ ರೈತರ ಬೆಳೆ ಸಮೀಕ್ಷೆ ಆಪ್ ಅಭಿವೃದ್ಧಿಪಡಿಸಲಾಗಿದೆ.
ರೈತರು ಮತ್ತು ಕೃಷಿ ಇಲಾಖೆ ನಡುವಿನ ಬಾಂಧವ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಅಭಿವೃದ್ಧಿಪಡಿಸಲಾದ ರೈತರ ಬೆಳೆ ಸಮೀಕ್ಷೆ ಆಪ್ ಅನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಲೋಕಾರ್ಪಣೆಗೊಳಿಸಿದ್ದಾರೆ. ಅಂತರ್ಜಾಲ ಸಹಾಯದಿಂದ ಮೊಬೈಲ್ ಆಪ್ ಮೂಲಕ ಕೃಷಿಕರು ಅಂಗೈನಲ್ಲಿ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಮತ್ತು ಸಮೀಕ್ಷೆ ನಡೆಸುವ ವಿವರವನ್ನು ಪಡೆಯಬಹುದಾಗಿದೆ.
ಆಂಡ್ರಾಯ್ಡ್ ಮೊಬೈಲ್ ಮೂಲಕ ಪ್ಲೇ ಸ್ಟೋರ್ ನಲ್ಲಿ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಒಟಿಪಿ ಮೂಲಕ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿಕೊಳ್ಳಬೇಕು.
ನೊಂದಣಿಯಾದ ಬಳಿಕ ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್ ಸೇರಿದಂತೆ ಜಮೀನಿನ ಮಾಹಿತಿ ನಮೂದಿಸಬೇಕು. ಬೆಳೆದ ಬೆಳೆಯ ವಿವರ ಮತ್ತು ಫೋಟೋಗಳನ್ನು ಅಪ್ಲೋಡ್ ಮಾಡಬೇಕು. ರೈತರ ಸರ್ವೇ ನಂಬರ್ ವಾರು ಜಮೀನಿನ ವಿವರಗಳನ್ನು ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್ ನಲ್ಲಿ ಸಂಗ್ರಹ ಮಾಡಲಾಗುವುದು.
ಇದನ್ನು ವಿವಿಧ ಯೋಜನೆಗಳಿಗೆ ಬಳಸಲಾಗುವುದು. ರೈತರು ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆಪ್ ಪರಿಚಯಿಸಲಾಗಿದೆ. ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ರೈತರು ಆಗಸ್ಟ್ 24ರೊಳಗೆ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು Karnatakacropsurvey ಲೈವ್ ಆಪ್ ಲಿಂಕ್ ಬಳಸಿ ಬೆಳೆ ವಿವರ ನಮೂದಿಸಬಹುದಾಗಿದೆ ಎಂದು ಹೇಳಲಾಗಿದೆ.
ಯೋಜನೆಯಿಂದ ಬೆಳೆ ನಷ್ಟ ಪರಿಹಾರ ವಿತರಣೆಗೆ ಮಾಹಿತಿ, ಬೆಳೆ ವಿಮೆ ಯೋಜನೆ ಅಡಿ ಬೆಳೆ ವಿವರ ಪರಿಶೀಲನೆ, ಪಹಣಿಯಲ್ಲಿ ಬೆಳೆ ವಿವರ ದಾಖಲು, ಕನಿಷ್ಠ ಬೆಂಬಲ ಬೆಲೆಗೆ ಫಲಾನುಭವಿ ಗುರುತಿಸುವುದು, ಬೆಳೆ ಕಟಾವು ಪ್ರಯೋಜನಕ್ಕೆ ಮಾಹಿತಿ ಸಿಗಲಿದೆ.