ದಾವಣಗೆರೆ: ಕರ್ನಾಟಕ ರಾಜ್ಯ ಸರ್ಕಾರ ಅಗಸ/ಕ್ಷೌರಿಕ ವೃತ್ತಿಯ ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಲಾಕ್‍ಡೌನ್ ಹಿನ್ನೆಲೆ 5000 ರೂ. ಪರಿಹಾರ ಘೋಷಣೆ ಮಾಡಿದ್ದು, ಈ ಪರಿಹಾರವನ್ನು ಪಡೆಯಲು ಸೇವಾ ಸಿಂಧು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಆಗಸ್ಟ್ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಫಲಾನುಭವಿಯು ಕಡ್ಡಾಯವಾಗಿ ಕ್ಷೌರಿಕ/ಅಗಸ ವೃತ್ತಿಯಲ್ಲಿ ತೊಡಗಿಕೊಂಡಿರಬೇಕು. 18 ರಿಂದು 65 ವರ್ಷದ ವಯೋಮಾನದವರಾಗಿರಬೇಕು.
ಈ ಯೋಜನೆಯಲ್ಲಿ ಸೌಲಭ್ಯವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಿದೆ. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ವೃತ್ತಿಯಲ್ಲಿ ತೊಡಗಿದ್ದಲ್ಲಿ, ಒಬ್ಬರು ಮಾತ್ರ ಪರಿಹಾರ ಧನಸಹಾಯವನ್ನು ಪಡೆಯಲು ಅರ್ಹರು. ಪರವಾನಿಗೆಯನ್ನು ಪಡೆದಿರುವ ಸಂಸ್ಥೆಯಲ್ಲಿ 4ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಅವರು ಅರ್ಜಿ ಸಲ್ಲಿಸಿದ್ದಲ್ಲಿ ಕಡ್ಡಾಯವಾಗಿ ತಪಾಸಣೆಯನ್ನು ಕೈಗೊಳ್ಳುವುದು.
ಪರವಾನಿಗೆಯನ್ನು ಪಡೆಯದೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯಿಂದ 2 ಕ್ಕಿಂತ ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸಿದಲ್ಲಿ ತಪಾಸಣೆಗೆ ಸ್ಥಳ ಪರಿಶೀಲನೆ ನಡೆಸಿ ಪಾವತಿಗೆ ಪರಿಗಣಿಸುವುದು. ಕರ್ನಾಟಕದಲ್ಲಿ ಅಗಸ/ಕ್ಷೌರಿಕ ವೃತ್ತಿ ನಿರ್ವಹಿಸುತ್ತಿರುವ ಬೇರೆ ರಾಜ್ಯದ ಕಾರ್ಮಿಕರು ಸಹ ಪರಿಹಾರವನ್ನು ಪಡೆಯಲು ಅರ್ಹರು. ಫಲಾನುಭವಿಗಳು ಸಲ್ಲಸುವ ಎಲ್ಲಾ ಅರ್ಜಿಗಳು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸ್ವೀಕೃತವಾಗತಕ್ಕದ್ದು.
ಫಲಾನುಭವಿಗಳು ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: ನಿಗದಿಪಡಿಸಿದ ನಮೂನೆಯಲ್ಲಿ ಕ್ಷೌರಿಕ/ಅಗಸ ವೃತ್ತಿ ನಿರ್ವಹಿಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ಉದ್ಯೋಗ ದೃಢೀಕರಣ ಪತ್ರ. ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಣೆ ಬಿ.ಪಿ.ಎಲ್ ಕಾರ್ಡ್, ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಪಾಸಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ (ಎಲ್ಲಾ ದಾಖಲೆಗಳನ್ನು ಸೇವಾಸಿಂಧೂವಿನಲ್ಲಿ ಅಪ್‍ಲೋಡ್ ಮಾಡುವುದು) ಉದ್ಯೋಗ ದೃಢೀಕರಣ ಪತ್ರವನ್ನು ಪಡೆಯಲು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಲ್ಲಿ ಮಹಾನಗರ ಪಾಲಿಕೆ/ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿ ನಿರೀಕ್ಷಕರನ್ನು ಗ್ರಾಮೀಣ ಪಂಚಾಯಿತಿಯ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ/ಕಾರ್ಯದರ್ಶಿಗಳನ್ನು ಸಂಪರ್ಕಿಸಬೇಕೆಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.