ಹಾವು ಕಂಡರೆ ಯಾರಿಗೆ ತಾನೆ ಭಯ ಇರುವುದಿಲ್ಲ ಹೇಳಿ ? ಸಾಮಾನ್ಯವಾಗಿ ಎಲ್ಲರಿಗೂ ಹೆದರಿಕೆ ಇರುತ್ತದೆ. ಅದರಲ್ಲೂ ಕೊಳಕು ಮಂಡಲದ ಹೆಸರು ಕೇಳಿದರೇನೆ ಬೆಚ್ಚಿ ಬೀಳುತ್ತೇವೆ.
ಒಂದು ಹಾವು ನೋಡಿದರೇ ಸುಧಾರಿಸಿಕೊಳ್ಳಲು ಸಮಯ ಬೇಕು. ಅಂತಹದರಲ್ಲಿ ಒಂದೇ ಜಾಗದಲ್ಲಿ ಒಂದರ ಮೇಲೊಂದರಂತೆ ಹರಿದಾಡುವ ಹತ್ತಾರು ಹಾವು ಕಂಡರೆ ಏನನ್ನಿಸೀತು ? ಮೈ ರೋಮಾಂಚನ ಆಗದೇ ಇರುತ್ತದೆಯೇ ?
ಕೊಯಮತ್ತೂರಿನ ಮೃಗಾಲಯದಲ್ಲಿ ಇದೇ ಪ್ರಸಂಗ ನಡೆದಿದ್ದು, ಹಾವೊಂದು ಬರೋಬ್ಬರಿ 33 ಮರಿಗಳಿಗೆ ಜನ್ಮ ನೀಡಿದೆ. ಇದೇನು ದೊಡ್ಡ ವಿಚಾರವಿಲ್ಲ ಈ ವಿಷಪೂರಿತ ಹಾವು 40-60 ಮರಿಗಳವರೆಗೆ ಹಡೆಯುತ್ತವೆ. ಆದರೆ, ಈಗ ಹಾಕಿರುವ 33 ಮರಿಗಳು ಮೃಗಾಲಯಕ್ಕೂ ತಲೆನೋವಾಗಿ ಪರಿಣಮಿಸಿದೆ.
ಮೃಗಾಲಯದ ನಿರ್ದೇಶಕ ಸೇಂಥಿಲ್ ನಾಥನ್ ಪ್ರಕಾರ, ಮೂವತ್ಮೂರೂ ಮರಿ ಹಾಗು ತಾಯಿ ಅರೋಗ್ಯವಾಗಿವೆ. ಆದರೆ, ಇಷ್ಟೊಂದು ಸಂಖ್ಯೆಯ ಹಾವುಗಳನ್ನು ಸಾಕಲು, ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಇವುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುತ್ತೇವೆ. ಅಲ್ಲಿ ಎಲ್ಲವೂ ಬದುಕುಳಿಯುತ್ತವೆಯೋ ಇಲ್ಲವೋ ಗೊತ್ತಿಲ್ಲ. ಅರಣ್ಯದಲ್ಲಿ ಪರಭಕ್ಷಕಗಳ ಪಾಲಾಗಲೂಬಹುದು ಎಂದಿದ್ದಾರೆ.