ಲಕ್ಸುರಿ ಕಾರ್ ಖರೀದಿಸುವ ಖಯಾಲಿ ಹೊಂದಿರುವ ಶ್ರೀಮಂತರು ಅದಕ್ಕೆ ಫ್ಯಾನ್ಸಿ ನಂಬರ್ ಕೂಡ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಎಷ್ಟು ಬೇಕಾದರೂ ಖರ್ಚು ಮಾಡಲೂ ಸಿದ್ಧರಿರುತ್ತಾರೆ.
ನವದೆಹಲಿ ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಅದನ್ನು ಗಮನಿಸಿ ಸರ್ಕಾರಕ್ಕೆ ಸಾಕಷ್ಟು ಆದಾಯ ತಂದುಕೊಡುತ್ತಿದೆ.
ಇಲಾಖೆ ಚತುಷ್ಚಕ್ರ ಹಾಗೂ ದ್ವಿಚಕ್ರ ವಾಹನಗಳ ಫ್ಯಾನ್ಸಿ ನಂಬರ್ ಗಳನ್ನು ಇ ಹರಾಜು ಹಾಕುತ್ತಿದೆ. ಆ ಮೂಲಕ ಜುಲೈ ತಿಂಗಳಲ್ಲಿ 33.8 ಲಕ್ಷ ರೂ. ಆದಾಯ ಗಳಿಸಿದೆ.
0009 ಎಂಬ ಕಾರಿನ ಸಂಖ್ಯೆ ಅತ್ಯಧಿಕ ಮೊತ್ತಕ್ಕೆ ಅಂದರೆ, 7.1 ಲಕ್ಷಕ್ಕೆ ಹರಾಜಾಗಿದೆ. ಈ ಸಿರೀಸ್ ನ ನಂಬರ್ ಗಳಿಗೆ ಭಾರಿ ಬೇಡಿಕೆ ಇದೆ. ಕಳೆದ ತಿಂಗಳು ಒಂದು ಸಂಖ್ಯೆ 4.2, ಇನ್ನೊಂದು 3.1 ಲಕ್ಷ ಮೊತ್ತಕ್ಕೆ ಹರಾಜಾಗಿತ್ತು. 0005 ಹಾಗೂ 1111 ಸಂಖ್ಯೆಗಳು 3 ಲಕ್ಷಕ್ಕಿಂತ ಅಧಿಕ ಬೆಲೆಗೆ ಹರಾಜಾಗಿವೆ.
ದ್ವಿಚಕ್ರ ವಾಹನ ನೋಂದಣಿ ಸಂಖ್ಯೆ 0006 ಗೆ ಐವತ್ತು ಸಾವಿರ ರೂ.ಗೆ ಮಾರಾಟವಾಗಿದೆ. ಬೈಕ್ ನ 9000 ಸಂಖ್ಯೆ 1.5 ಲಕ್ಷಕ್ಕೆ ಹರಾಜಾಗಿದೆ. ಐದು ಪ್ರಮುಖ ನಂಬರ್ ಗಳಿಂದ 9.3 ಲಕ್ಷ ರೂ. ಆದಾಯ ಬಂದಿದೆ. 0022 ಗೆ 3.4 ಲಕ್ಷ ರೂ. ಬಂದಿದೆ. ಕಳೆದ ನಾಲ್ಕು ತಿಂಗಳಲ್ಲಿ ಇಲಾಖೆ 1078 ಫ್ಯಾನ್ಸಿ ನಂಬರ್ ಹರಾಜು ಹಾಕುವ ಮೂಲಕ 66.3 ಲಕ್ಷ ರೂ.ಆದಾಯ ಗಳಿಸಿದೆ. ಆದರೆ, ಕಳೆದ ವರ್ಷ ಇಷ್ಟೇ ನೋಂದಣಿ ಸಂಖ್ಯೆಗಳ ಹರಾಜಿನಿಂದ 3.7 ಕೋಟಿ ಆದಾಯ ಬಂದಿತ್ತು.