ಕಳೆದ ಕೆಲವು ದಿನಗಳಿಂದಲೂ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಈಗ ಮತ್ತೊಂದು ವಿವಾದಾತ್ಮಕ ಸೂಚನೆಯನ್ನು ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಅಯೋಧ್ಯೆಯ ಶ್ರೀರಾಮ ಭಾರತೀಯನಲ್ಲ. ಆತ ನೇಪಾಳಿಯವ. ಆತನ ಜನ್ಮ ಭೂಮಿ ನೇಪಾಳ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಸ್ಥಳೀಯ ಆಡಳಿತಕ್ಕೆ ವಿವಾದಾತ್ಮಕ ಸೂಚನೆ ನೀಡಿದ್ದಾರೆ.
ಇತ್ತೀಚೆಗಷ್ಟೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ನರೇಂದ್ರ ಮೋದಿಯವರು ಶಿಲಾನ್ಯಾಸಕ್ಕೆ ಚಾಲನೆಯನ್ನು ನೀಡಿದ್ದಾರೆ. ಈ ಬೆನ್ನಲ್ಲೇ ನೇಪಾಳ ಪ್ರಧಾನಿ ಚಿತ್ವಾನ್ ಜಿಲ್ಲೆಯ ಮಾದಿ ಪಟ್ಟಣಕ್ಕೆ ಅಯೋಧ್ಯಾಪುರಿ ಎಂದು ಮರುನಾಮಕರಣ ಮಾಡುವಂತೆ ಹಾಗೂ ಇಲ್ಲಿನ ರಾಮಜನ್ಮ ಭೂಮಿಯ ಬಗ್ಗೆ ದೊಡ್ಡದಾಗಿ ಪ್ರಚಾರ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಇನ್ನು ಆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮಂದಿರ ನಿರ್ಮಿಸಿ, ಮುಂದಿನ ದಿನಗಳಲ್ಲಿ ನೀಲಿ ನಕ್ಷೆ ಸಿದ್ದಪಡಿಸುವಂತೆಯೂ ಅಲ್ಲಿನ ಮೇಯರ್ಗೆ ಸೂಚನೆಯನ್ನು ನೀಡಿದ್ದಾರೆ.
ಓಲಿಯ ಈ ನಿರ್ಧಾರಕ್ಕೆ ಅಲ್ಲಿನ ಅವರದೇ ಪಕ್ಷ ನೇಪಾಳ ಕಮ್ಯೂನಿಸ್ಟ್ ಪಾರ್ಟಿ ಕೆಲವೊಂದು ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ನೇಪಾಳ ಪ್ರಧಾನಿಯ ಈ ನಿರ್ಧಾರಕ್ಕೆ ಭಾರತೀಯರು ಕಿಡಿ ಕಾರುತ್ತಿದ್ದಾರೆ. ಓಲಿಯ ಈ ನಿರ್ಧಾರ ಚೀನಾದಿಂದ ಬಂದಿದ್ದು, ಅವರು ಹೇಳಿದಂತೆ ಓಲಿ ಕುಣಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.