
ಲಕ್ನೋ: ಪೊಲೀಸರಿಗೆ ಪ್ರತ್ಯೇಕ ಕೈ ತೊಳೆಯುವ ಪ್ರದೇಶ ಒದಗಿಸಿದ್ದ ಮುಜಾಫರ್ ನಗರ ಎಸ್.ಎಸ್.ಪಿ. ಅಭಿಷೇಕ ಯಾದವ್ ಈಗ ಪೊಲೀಸ್ ಸಿಬ್ಬಂದಿಗೆ ಆರೋಗ್ಯಕರ ಆಹಾರ ಒದಗಿಸಲು ಕೆಫೆ ಒಂದನ್ನು ಪ್ರಾರಂಭಿಸಿದ್ದಾರೆ.
ಕೆಫೆಯಲ್ಲಿ ಸಾವಯವ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ತಾಜಾ ಹಣ್ಣಿನ ಜೂಸ್, ಸ್ಮೂದಿ, ದಲಿಯಾ, ಅವಲಕ್ಕಿ ಸೇರಿದಂತೆ ಇನ್ನಿತರ ಕೆಲ ಉಪಯುಕ್ತ ಆಹಾರ ಇಲ್ಲಿ ಸಿಗುತ್ತಿದೆ. ಅಡುಗೆಗೆ ಆಲಿವ್ ಎಣ್ಣೆ ಬಳಸಲಾಗುತ್ತಿದೆ.
“ಅನಿಯಮಿತ ಒತ್ತಡದ ಕೆಲಸದಿಂದ ಉತ್ತರ ಪ್ರದೇಶ ಪೊಲೀಸರಿಗೆ ರಕ್ತದೊತ್ತಡ, ಮಧುಮೇಹ ಸಾಮಾನ್ಯವಾಗಿಬಿಟ್ಟಿದೆ. ಅದಕ್ಕೆ ಆರೋಗ್ಯಕರ ಆಹಾರ ಕ್ರಮ ಹಾಗೂ ವ್ಯಾಯಾಮ ಮುಂತಾದವು ಆರೋಗ್ಯ ಕಾಪಾಡಲು ಅತಿ ಮುಖ್ಯವಾಗಿದೆ. ಇದರಿಂದ ಈ ವ್ಯವಸ್ಥೆ ಮಾಡಲಾಗಿದೆ” ಎಂದು ಎಸ್.ಎಸ್.ಪಿ. ತಿಳಿಸಿದ್ದಾರೆ. ಇನ್ನು ಮುಂದೆ ಪೊಲೀಸರಿಗೆ ಕೆಫೆ ಪಕ್ಕ ಜಿಮ್ ವ್ಯವಸ್ಥೆ ಕೂಡ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.