ಮಂಗಳೂರು: ಆನ್ ಲೈನ್ ತರಗತಿಗಳಿಗೆ ಹಾಜರಾಗಲು ದಕ್ಷಿಣ ಕನ್ನಡ ಜಿಲ್ಲೆಯ ಹಲವು ವಿದ್ಯಾರ್ಥಿಗಳು ಬೆಟ್ಟ ಹತ್ತಬೇಕಾಗಿದೆ. ಕಾರಣ, ಅವರ ಗ್ರಾಮದಲ್ಲಿ ಇಂಟರ್ನೆಟ್ ಇಲ್ಲವಲ್ಲ..!
ಪೆರ್ಲ, ಬಂಡಿಹೊಳೆ, ಬೂಡದಮಕ್ಕಿ, ಶಿಂಬಾಜೆ, ಹೊಸ್ತೋಟ, ಬೆಳ್ತಂಗಡಿ ಮುಂತಾದ ಕರಾವಳಿ ಊರುಗಳಲ್ಲಿ ಹಲವು ವಿದ್ಯಾರ್ಥಿಗಳು ಇಂಟರ್ನೆಟ್ ಗಾಗಿ ಬೆಟ್ಟ ಹತ್ತಬೇಕಾಗಿ ಬಂದಿದೆ.
ದಕ್ಷಿಣ ಕನ್ನಡ ಶೈಕ್ಷಣಿಕ ಕೇಂದ್ರ, ಪೂರ್ವಕ್ಕೆ ಪಶ್ಚಿಮ ಘಟ್ಟಗಳು, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಉತ್ತರಕ್ಕೆ ಉಡುಪಿ, ದಕ್ಷಿಣಕ್ಕೆ ಕೇರಳವಿದೆ. ಕುದುರೆಮುಖ ವನ್ಯಜೀವಿಧಾಮದ 9 ರೇಂಜ್ ಗಳಲ್ಲಿ ಮಂಗಳೂರು ಅರಣ್ಯ ವೃತ್ತದ ಬೆಳ್ತಂಗಡಿಯೂ ಸಹ ಒಂದು.
ಕುದುರೆಮುಖ ವನ್ಯಜೀವಿಧಾಮ ಪ್ರದೇಶ ನಿತ್ಯ ಹರಿದ್ವರ್ಣ ಹಾಗೂ ಅರೆ ನಿತ್ಯ ಹರಿದ್ವರ್ಣ ಕಾಡುಗಳನ್ನು ಹೊಂದಿದ ಪ್ರದೇಶ. ಇಂಥ ಕಡೆಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವುದು ಕಷ್ಟ.
ಕೊರೊನಾದಂಥ ಪರಿಸ್ಥಿತಿಯಲ್ಲಿ ಹಲವು ವಿದ್ಯಾರ್ಥಿಗಳು ವರ್ಚುವಲ್ ಕ್ಲಾಸ್ ಹಾಗೂ ಇತರ ಆನ್ ಲೈನ್ ಕ್ಲಾಸ್ ಗಳನ್ನು ಎದುರಿಸುತ್ತಿದ್ದಾರೆ. ಆದರೆ, ಅವರಿಗೆ ಉಂಟಾಗುತ್ತಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಜಿಲ್ಲಾಡಳಿತ ಮೌನ ವಹಿಸಿದೆ