ಈ ದರೋಡೆಕೋರರ ಅದೃಷ್ಟ ಚೆನ್ನಾಗಿರಲಿಲ್ಲ ಎನಿಸುತ್ತದೆ, 2015ರಲ್ಲಿ ಲೂಟಿ ಮಾಡಿದ್ದ ಮನೆಗೆ ಮತ್ತೆ ದರೋಡೆ ಮಾಡಲು ಬಂದಾಗ ಸಿಕ್ಕಿಬಿದ್ದು ಕಂಬಿ ಎಣಿಸುವಂತಾಗಿದೆ.
ಆರೋಪಿ ಸೋಮನಾಥ್ ಬಂಸೊಡ್ ಹಾಗೂ ಆತನ ಸೋದರ ಸಂಬಂಧಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇವರು 2015ರಲ್ಲಿ ಪುಣೆಯ ಒಂದು ಮನೆಯನ್ನು ದೋಚಿ ಐವತ್ತು ಲಕ್ಷದೊಂದಿಗೆ ಪರಾರಿಯಾಗಿದ್ದರು. 22ಲಕ್ಷ ರೂ. ಪಾಲು ಪಡೆದ ಸೋಮನಾಥ್ ಒನ್ ಬೆಡ್ ರೂಂ ಫ್ಯ್ಲಾಟ್ ಖರೀದಿಸಿದ್ದ. ಆತನ ಸಹಚರ ಸುಧಾಕರ್, 20 ಲಕ್ಷಕ್ಕೆ ಆಸ್ತಿ ಖರೀದಿಸಿದ್ದ. ಜತೆಗೆ ಕಾರು, ಮೋಟರ್ ಸೈಕಲ್ ಖರೀಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮನಾಥ್ ಜುಲೈ 30ರಂದು ಚಾಕು ಹಿಡಿದು ರಾಬರಿ ಮಾಡಲು ಬಂದಿದ್ದ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಬಳಿಕ ಆತನ ಸಹಚರನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಂದು ದೂರುದಾರ 4 ಲಕ್ಷ ರೂ. ಮತ್ತು 1 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ದೂರಿತ್ತಿದ್ದರು. ತನ್ನ ಪತ್ನಿಗೆ ಇಷ್ಟೊಂದು ದೊಡ್ಡ ಹಣ ನಷ್ಟವಾಗಿದೆ ಎಂದು ತಿಳಿದು ಶಾಕ್ ಆಗಬಾರದೆಂದು ಕಡಿಮೆ ಮೊತ್ತ ನಷ್ಟವಾಗಿದೆ ಎಂದು ಹೇಳಿಕೊಂಡಿದ್ದರಂತೆ. ಆರೋಪಿಗಳಿಂದ ಒಟ್ಟಾರೆ 62 ಲಕ್ಷ ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.