ಆಸ್ಪತ್ರೆ ಬಳಿ ನಿರಾಶ್ರಿತಳಾಗಿದ್ದ 80 ವರ್ಷದ ವೃದ್ಧೆಯನ್ನು ಅಮಾನುಷವಾಗಿ ಹಲ್ಲೆಗೈದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಸಂಜಯ್ ಮಿಶ್ರ ಬಂಧಿತ.
ಆಸ್ಪತ್ರೆಯ ಟ್ರಾಮಾ ಕೇಂದ್ರದ ಬಳಿ ವಾಸ್ತವ್ಯ ಹೂಡಿದ್ದ ವೃದ್ಧೆ ನಿರಾಶ್ರಿತಳಾಗಿ ಆಶ್ರಯ ಬೇಡಿದ್ದಳು. ಆದರೆ, ಇದಕ್ಕೆ ತಿರಸ್ಕರಿಸಿದ್ದ ಸಂಜಯ್ ಮಿಶ್ರಾ, ಆಕೆಯನ್ನು ಅಲ್ಲಿಂದ ಕಳುಹಿಸಲು ಹೀನಾಯವಾಗಿ ನಡೆಸಿಕೊಂಡಿದ್ದೂ ಅಲ್ಲದೆ, ನಿರ್ದಯಿಯಾಗಿ ಹಲ್ಲೆ ನಡೆಸಿದ್ದಾನೆ.
ಈ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳದ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯಲ್ಲಿ ಇಬ್ಬರು ನಾಗರಿಕರೂ ಕಾಣಿಸಿಕೊಂಡಿದ್ದು, ಈ ಕರಾಳ ಕೃತ್ಯವನ್ನೇಕೆ ಖಂಡಿಸಿಲ್ಲ ಎಂಬುದು ಬೇಸರ ತರಿಸಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.