ಮೈಸೂರು: ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ಕೊಂದು ಹಾಕಿದ ಆಘಾತಕಾರಿ ಘಟನೆ ನಡೆದಿದೆ.
38 ವರ್ಷದ ಹರೀಶ್ ಮೃತಪಟ್ಟ ಮಾವುತ ಎಂದು ಹೇಳಲಾಗಿದೆ. ಅಭಿ ಹೆಸರಿನ ಆನೆಗೆ ಶುಕ್ರವಾರ ಮಧ್ಯಾಹ್ನ ಹರೀಶ್ ಹುಲ್ಲು ಹಾಕಿದ್ದು ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆಕ್ರೋಶಗೊಂಡ ಆನೆ ಹರೀಶ್ ಅವರನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ತುಳಿದಿದೆ ಎನ್ನಲಾಗಿದೆ.
ಸ್ಥಳದಲ್ಲಿದ್ದ ಮೃಗಾಲಯದ ಸಿಬ್ಬಂದಿ ಹರೀಶ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುತ್ತಿಗೆ ನೌಕರರಾಗಿ ಹರೀಶ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.