ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಬಿಹಾರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು, ಸಿಬಿಐ ತನಿಖಾ ತಂಡ, ಬಿಹಾರ ಪೊಲೀಸ್ ಎಫ್ಐಆರ್ ವರದಿಯಂತೆ ಸುಶಾಂತ್ ಸಿಂಗ್ ರಜಪೂತ್ ಲಿವ್ ಇನ್ ಪಾರ್ಟನರ್ ರಿಯಾ ಚಕ್ರವರ್ತಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ.
ಇದರಿಂದಾಗಿ ರಿಯಾ ಚಕ್ರವರ್ತಿಗೆ ಸಂಕಷ್ಟ ಎದುರಾಗಿದ್ದು, ಇದರ ಜೊತೆಗೆ ಅಕ್ರಮ ಹಣ ವರ್ಗಾವಣೆ ಕುರಿತಂತೆ ಜಾರಿ ನಿರ್ದೇಶನಾಲಯದ ತನಿಖೆಯನ್ನೂ ರಿಯಾ ಚಕ್ರವತಿ ಎದುರಿಸಬೇಕಿದೆ. ಸುಶಾಂತ್ ಸಿಂಗ್ ತಂದೆ, ಬಿಹಾರದ ಪಾಟ್ನಾ ಪೊಲೀಸರಲ್ಲಿ ದಾಖಲಿಸಿದ ದೂರಿನನ್ವಯ ಸಿಬಿಐ ರಿಯಾ ಚಕ್ರವರ್ತಿ ವಿರುದ್ದ ಎಫ್ಐಆರ್ ದಾಖಲಿಸಿದೆ ಎಂದು ಹೇಳಲಾಗಿದೆ.
ಈ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮೊದಲಿಗೆ ಮುಂಬೈ ಹಾಗೂ ಪಾಟ್ನಾ ಪೊಲೀಸರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿರುವ ಕಾರಣ ಮತ್ತಷ್ಟು ಜಟಾಪಟಿಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆದರೆ ಬಾಲಿವುಡ್ ಚಿತ್ರರಂಗದ ಹಲವು ಹುಳುಕುಗಳು ಬಹಿರಂಗವಾಗಲಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.