ದತ್ತು ಪಡೆಯಲ್ಪಟ್ಟ ಭಾರತೀಯ ಮೂಲದ ಟೀನೇಜ್ ಬಾಲಕಿಯೊಬ್ಬಳು, ಕ್ಯಾಲಿಫೋರ್ನಿಯಾದಲ್ಲಿರುವ ವಯಸ್ಸಾದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಫಂಡ್ ರೈಸ್ ಮಾಡುವ ಮೂಲಕ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾಳೆ.
ಈಕೆ ಇಲ್ಲಿನ ಸ್ಯಾನ್ ಹ್ಯೂಸೆ ಯಲ್ಲಿ ತನ್ನ ದತ್ತು ಪಡೆದ ಪೋಷಕರೊಂದಿಗೆ ವಾಸಿಸುತ್ತಿದ್ದಾಳೆ. ಮುಂಬೈಯಲ್ಲಿ ಪುಟಾಣಿ ಪಾಪು ಆಗಿದ್ದಾಗಲೇ ನಾಯಿ ಮರಿಗಳನ್ನು ಕಂಡರೆ ಬಲೇ ಇಷ್ಟಪಡುತ್ತಿದ್ದ ಈ ಬಾಲಕಿ, ಬೆಳೆಯುತ್ತಾ ನಾಯಿಗಳ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾಳೆ.
“ನನಗೆ ಎರಡು ವರ್ಷವಿದ್ದ ವೇಳೆ ದತ್ತು ಪಡೆದುಕೊಂಡು ಬಂದು, ನನ್ನ ಅಜ್ಜ-ಅಜ್ಜಿಯೊಂದಿಗೆ ಮುಂಬೈ ಅಪಾರ್ಟ್‌ಮೆಂಟ್ ಒಂದರಲ್ಲಿ ಇರಿಸಿದ್ದ ಕಥೆಯನ್ನು ನನ್ನ ಪೋಷಕರು ಹೇಳುತ್ತಾರೆ. ಅವರಿಗೆ ನನ್ನನ್ನು ಸಣ್ಣದೊಂದು ಜಾಗದಲ್ಲಿ ಇರಿಸುವುದು ಇಷ್ಟವಿರಲಿಲ್ಲ. ಆ ವೇಳೆ, ನಾಯಿಯೊಂದು ಮರಿಗಳನ್ನು ಹಾಕಿತ್ತು, ನಾನು ಅವುಗಳೊಂದಿಗೆ ಆಡಿಕೊಂಡು ಸಮಯ ಕಳೆಯುತ್ತಿದ್ದೆ” ಎಂದು ಮೀನಾ ಹೆಸರಿನ ಈ ಬಾಲಕಿ ತಿಳಿಸಿದ್ದಾಳೆ. ಅದಾಗಲೇ $14,000ಗಳನ್ನು ಸಂಗ್ರಹಿಸಿರುವ ಈ ಬಾಲಕಿ, ಬೀದಿಗೆ ಬಿದ್ದ ನಾಯಿಗಳಿಗೆ ಸೂರು ಕಲ್ಪಿಸುವ ಆಶಯ ಹೊಂದಿದ್ದಾಳೆ. ಈಕೆಯ ಈ ಕೈಂಕರ್ಯಕ್ಕೆ ಇಲ್ಲಿನ ಖಾಸಗಿ ಕಂಪನಿಯೊಂದು ಕೈ ಜೋಡಿಸಿದೆ.