ಕೊರೊನಾ ವೈರಸ್ನಿಂದಾಗಿ ದೇಶದಾದ್ಯಂತ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಕಳೆದ 5 ತಿಂಗಳಿಂದ ಶಾಲೆಗಳನ್ನು ಮುಚ್ಚಲಾಗಿದೆ. ಆನ್ಲೈನ್ ಶಾಲಾ ಶಿಕ್ಷಣ, ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ವಿವಾದಗಳು ಕೇಳಿ ಬರ್ತಿವೆ. ಕೆಲ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದೆ.
ಇಂತಹ ಪ್ರಕರಣವೊಂದರ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರದ ನಿರ್ಧಾರವನ್ನು ಬದಲಿಸುವಂತೆ ಸೂಚಿಸಿದೆ. ಶಾಲೆ ಮತ್ತೆ ಶುರುವಾಗುವವರೆಗೂ ಬೋಧನಾ ಶುಲ್ಕ ತೆಗೆದುಕೊಳ್ಳದಂತೆ ಸರ್ಕಾರ ಸೂಚನೆ ನೀಡಿತ್ತು. ಆದ್ರೆ ಹೈಕೋರ್ಟ್ ಖಾಸಗಿ ಶಾಲೆಗಳು ಬೋಧನಾ ಶುಲ್ಕ ವಿಧಿಸಬಹುದು ಎಂದಿದೆ.
ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಖಾಸಗಿ ಶಾಲೆಗಳು ಪೋಷಕರಿಂದ ಬೋಧನಾ ಶುಲ್ಕವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂದು ಗುಜರಾತ್ ಸರ್ಕಾರ ಜುಲೈ 16 ರಂದು ಆದೇಶ ಹೊರಡಿಸಿತ್ತು. ಆದರೆ ಈಗ ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಜೆ.ಬಿ. ಪಾರ್ಡಿಲ್ವಾಲಾ ಅವರ ವಿಭಾಗೀಯ ನ್ಯಾಯಪೀಠ ಈ ನಿರ್ಧಾರವನ್ನು ಬದಲಿಸಿದೆ.
ಗುಜರಾತ್ ಹೈಕೋರ್ಟ್ ಪ್ರಕಾರ, ಶಾಲೆಗಳು ಬೋಧನಾ ಶುಲ್ಕ ವಿಧಿಸುವುದನ್ನು ತಡೆದಲ್ಲಿ ಅನೇಕ ಸಣ್ಣ ಶಾಲೆಗಳು ಶಾಶ್ವತವಾಗಿ ಮುಚ್ಚಬಹುದು. ಅದೇ ಸಮಯದಲ್ಲಿ, ಪೋಷಕರು ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಶಾಲೆಗಳು ಸಹ ಅರ್ಥಮಾಡಿಕೊಳ್ಳಬೇಕು. ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ಪೋಷಕರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರ ಸಮತೋಲನ ಕಾಪಾಡಬೇಕೆಂದು ಕೋರ್ಟ್ ಹೇಳಿದೆ.