ನವದೆಹಲಿ: ಕೆಲವು ವರ್ಷಗಳಿಂದ ರಾಜಕೀಯವಾಗಿ ಭಾರಿ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿರುವ ಕೇಂದ್ರ ಕಚೇರಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಲೀಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಐಸಿಸಿ ಕೇಂದ್ರ ಕಚೇರಿ ಸೇರಿದಂತೆ ಕಾಂಗ್ರೆಸ್ ವಶದಲ್ಲಿರುವ ನಾಲ್ಕು ಪ್ರಮುಖ ಕಟ್ಟಡಗಳನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರೈಸಿನಾ ರಸ್ತೆಯಲ್ಲಿರುವ ಯುವ ಕಾಂಗ್ರೆಸ್ ಕಚೇರಿ, ಚಾಣಕ್ಯಪುರಿಯಲ್ಲಿರುವ ಪಕ್ಷದ ಕಚೇರಿ, ದೆಹಲಿ 24ನೇ ಅಕ್ಬರ್ ರಸ್ತೆಯ ಕಾಂಗ್ರೆಸ್ ಮುಖ್ಯ ಕಚೇರಿ ಮತ್ತು ಸೇವಾದಳ ಕಚೇರಿ ಖಾಲಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸೂಚನೆ ನೀಡಬೇಕೆಂದು ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಕಾಂಗ್ರೆಸ್ ವಶದಲ್ಲಿರುವ ಎಐಸಿಸಿ ಕೇಂದ್ರ ಕಚೇರಿ ಸೇರಿದಂತೆ ನಾಲ್ಕು ಕಟ್ಟಡಗಳ ಲೀಸ್ ಅವಧಿ ಮುಕ್ತಾಯವಾಗಿದ್ದರಿಂದ ಈ ಶಿಫಾರಸು ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷ ಕೇಂದ್ರ ಕಚೇರಿ ಕಟ್ಟಡವನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ ಎಂದು ಹೇಳಲಾಗಿದೆ.