ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ ಒಂದು ವಾರದಿಂದ ಪ್ರತಿನಿತ್ಯವೂ 5000ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇದರ ಮಧ್ಯೆ ವರುಣನ ಅಬ್ಬರವೂ ಜೋರಾಗಿದ್ದು, ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜೊತೆಗೆ ಜಲಾಶಯಗಳು ಸಹ ಭರ್ತಿಯಾಗುವತ್ತ ಸಾಗಿದ್ದು, ಕೆಲವು ಭಾಗಗಳಲ್ಲಿ ಪ್ರವಾಹದ ಭೀತಿ ತಲೆದೋರಿದೆ.
ಅದರಲ್ಲೂ ಮಂಜಿನ ನಗರಿ ಕೊಡಗಿನಲ್ಲಿ ಆಗುತ್ತಿರುವ ನಿರಂತರ ವರ್ಷಧಾರೆ 2018ರ ಪರಿಸ್ಥಿತಿಯನ್ನು ನೆನಪಿಸುತ್ತಿದ್ದು, ಮತ್ತೊಮ್ಮೆ ಇದು ತಲೆದೋರಲಿದೆಯಾ ಎಂಬ ಆತಂಕ ಮನೆಮಾಡಿದೆ. ಹವಾಮಾನ ಇಲಾಖೆ ಇನ್ನೂ ಕೆಲವು ದಿನಗಳ ಕಾಲ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದ್ದು, ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ.