ಬೆಂಗಳೂರು: ಅಂತಿಮ ಸೆಮಿಸ್ಟರ್/ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಎಲ್ಲ ರೀತಿಯ ತಯಾರಿ ನಡೆದಿದ್ದು, ಇದರ ಜತೆಗೆ ಅವರ ಬ್ಯಾಕ್‌ಲಾಗ್ ವಿಷಯಗಳ ಪರೀಕ್ಷೆಗಳನ್ನೂ ನಡೆಸಲು ಎಲ್ಲ ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
ಸಿಇಟಿ ಪರೀಕ್ಷೆ ಸುಗಮವಾಗಿ ಪೂರ್ಣಗೊಂಡಿರುವುದರ ಪ್ರಯುಕ್ತ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ರಸ್ತೆ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆ ವಿಡಿಯೊ ಸಂವಾದ ನಡೆಸಿ, ಕೃತಜ್ಞತೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕೋವಿಡ್ ಕಾರಣದಿಂದಾಗಿ ಅಂತಿಮ ವರ್ಷ/ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಕೆಲವು ವಿಶ್ವವಿದ್ಯಾಲಯಗಳು ಅಂತಿಮ ವರ್ಷದ ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿರುವ (ಅನುತ್ತೀರ್ಣರಾಗಿರುವ) ಹಿಂದಿನ ಸೆಮಿಸ್ಟರ್‌ಗಳ ವಿಷಯಗಳ ಪರೀಕ್ಷೆ ನಡೆಸುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ಮಾಹಿತಿ ಸಿಕ್ಕಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ನಮ್ಮ ಉದ್ದೇಶ ಇರುವುದು ಅಂತಿಮ ವರ್ಷದಲ್ಲಿ ಇರುವ ವಿದ್ಯಾರ್ಥಿಗಳು ಪದವಿಯನ್ನು ಮುಗಿಸಿಕೊಂಡು ಹೊರಹೋಗಬೇಕು ಎನ್ನುವುದು. ಇಂತಹ ಸನ್ನಿವೇಶದಲ್ಲಿ ಕೇವಲ ಅಂತಿಮ ವರ್ಷ/ಸೆಮಿಸ್ಟರ್ ಪರೀಕ್ಷೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ, ಹಿಂದಿನ ವರ್ಷಗಳ, ಅನುತ್ತೀರ್ಣಗೊಂಡಿರುವ ವಿಷಯಗಳ ಪರೀಕ್ಷೆಗಳಿಗೂ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ಕೆಲಸವನ್ನು ಎಲ್ಲ ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಿದ್ದಾರೆ.
ಕಾಲೇಜ್ ಗಳಿಗೆ ಜಾಗ ನೀಡಲು ಸೂಚನೆ:
ರಾಜ್ಯದ ವಿವಿಧ ಜಿಲ್ಲೆಗಳ 33 ಪದವಿ ಕಾಲೇಜುಗಳಿಗೆ ಜಾಗದ ಸಮಸ್ಯೆ ಇದೆ. ಇಷ್ಟೂ ಕಾಲೇಜುಗಳಿಗೆ ಜಾಗ ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ಸಂಬಂಧಿಸಿದ್ದು. ಬಾಗಲಕೋಟೆ ಜಿಲ್ಲೆಯೊಂದರಲ್ಲೇ ಆರು ಪದವಿ ಕಾಲೇಜುಗಳಿಗೆ ನಿವೇಶನವೇ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟರ್ ರಾಜೇಂದ್ರ ಅವರು, ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಜಾಗ ಕೊಡಿಸುವ ಭರವಸೆ ನೀಡಿದ್ದು, ಇದಕ್ಕೆ ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿ, ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೇ ರೀತಿ ಐದು ಡಿಪ್ಲೊಮಾ ಕಾಲೇಜು ಮತ್ತು 28 ಐಟಿಐ ಕಾಲೇಜುಗಳಿಗೆ ರಾಜ್ಯದ ವಿವಿಧೆಡೆ ಜಾಗದ ಕೊರತೆ ಇದ್ದು, ತಕ್ಷಣ ಜಿಲ್ಲಾಧಿಕಾರಿಗಳು ಇತ್ತ ಗಮನ ನೀಡಬೇಕು. ಜಾಗ ಕೊಟ್ಟ ತಕ್ಷಣ ಹೊಸ ಕಟ್ಟಡಗಳು ತಲೆ ಎತ್ತಲಿವೆ ಎಂದು ಹೇಳಿದ್ದಾರೆ.
ಸಿಇಟಿ ಯಶಸ್ಸಿಗೆ ಕೃತಜ್ಞತೆ ಸಲ್ಲಿಕೆ:
ಕೋವಿಡ್ ಕಾರಣದಿಂದಾಗಿ ಎದುರಾಗಿದ್ದ ಸಂಕಷ್ಟದ ಸಂದರ್ಭದಲ್ಲಿಯೂ ಸಿಇಟಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕಾರಣರಾದ ಸರ್ಕಾರದ ಎಲ್ಲ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೂ ಡಿಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ.
ಒಟ್ಟು 1,94,419 ಮಂದಿ ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 1,75,428 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು, ಸಾಮಾನ್ಯ ವರ್ಷಗಳಲ್ಲಿ ಇದ್ದಷ್ಟೇ ಹಾಜರಾತಿ ಈ ಸಂದರ್ಭದಲ್ಲಿಯೂ ಇತ್ತು. ಇಷ್ಟಕ್ಕೂ ಈ ಬಾರಿ ಸಿಇಟಿ ನಡೆಯುವ ವೇಳೆಗೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಕೂಡ ಬಂದಿತ್ತು. ಈ ಕಾರಣಕ್ಕೆ ಅರ್ಹರಾಗಿಲ್ಲದ ಕೆಲವರು ಸಿಇಟಿಯಿಂದ ಹಿಂದೆ ಸರಿದಿರಬಹುದು. ಒಟ್ಟಿನಲ್ಲಿ ಸಿಇಟಿ ಪರೀಕ್ಷೆ ನಡೆಸಿದ್ದು ಒಂದು ರೀತಿಯ ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ.
ನಾವು ಪರೀಕ್ಷೆ ನಡೆಸಿದ ನಂತರ ನಮ್ಮದೇ ನಿಯಮಗಳನ್ನು ಮುಂದಿಟ್ಟುಕೊಂಡು ಅರುಣಾಚಲ ಪ್ರದೇಶದಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾಗೆಯೇ ನಮ್ಮದೇ ಕೆಪಿಎಸ್‌ಸಿ ಕೂಡ ಪರೀಕ್ಷೆ ನಡೆಸುವುದಾಗಿ ಹೇಳಿದೆ. ಹೀಗೆ ಅನೇಕರಿಗೆ ಮಾದರಿಯಾದಂತಹ ಕೆಲಸವನ್ನು ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿಯೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಾಡಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ರಮಣರೆಡ್ಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ರಾಜಾ, ಪದವಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.