ಗಣೇಶನ ಹಬ್ಬ ಬಂದೇ ಬಿಟ್ಟಿದೆ, ಗಣೇಶನಿಗೆ ಮೋದಕ ಎಂದರೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವಂತಹ ಮೋದಕವಿದೆ.
ಹಬ್ಬಕ್ಕೆ ಅಥವಾ ಬೇರೆ ದಿನಗಳಲ್ಲಿ ಸಿಹಿ ತಿನ್ನುವ ಬಯಕೆಯಾದಾಗ ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು-1 ಕಪ್, ಎಣ್ಣೆ-1 ಟೀ ಸ್ಪೂನ್, ಬೆಲ್ಲ-1 ಕಪ್, ತೆಂಗಿನಕಾಯಿ ತುರಿ-1 ಕಪ್, ಏಲಕ್ಕಿ ಪುಡಿ-1/4 ಟೀ ಸ್ಪೂನ್, ತುಪ್ಪ-1 ಚಮಚ.
ಮಾಡುವ ವಿಧಾನ:
ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 1 ¼ ಕಪ್ ನೀರು, 1 ಟೀ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಅಕ್ಕಿ ಹಿಟ್ಟು ಸೇರಿಸಿ ಚೆನ್ನಾಗಿ ಕದಡಿ. ಇದು ಚೆನ್ನಾಗಿ ಬೆಂದ ಬಳಿಕ ಇದನ್ನು ಒಂದು ಪ್ಲೇಟ್ ಗೆ ಹಾಕಿಕೊಳ್ಳಿ. ಇದರ ಬಿಸಿ ಸ್ವಲ್ಪ ಕಡಿಮೆಯಾದ ಬಳಿಕ ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಚೆನ್ನಾಗಿ ನಾದಿ. ನಂತರ ಬಾಣಲೆಗೆ ಬೆಲ್ಲ ಹಾಕಿ ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಇದಕ್ಕೆ ತೆಂಗಿನಕಾಯಿ ತುರಿ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದು ದಪ್ಪಗಾಗುತ್ತ ಬರುತ್ತಿದ್ದಂತೆ ಏಲಕ್ಕಿ ಪುಡಿ ಸೇರಿಸಿ ಗ್ಯಾಸ್ ಆಫ್ ಮಾಡಿ. ಮಾಡಿಟ್ಟುಕೊಂಡ ಬೆಲ್ಲ, ತೆಂಗಿನಕಾಯಿ ಮಿಶ್ರಣದಿಂದ ಚಿಕ್ಕ ಗಾತ್ರದ ಉಂಡೆ ಕಟ್ಟಿಕೊಳ್ಳಿ. ಹಾಗೇ ಹಿಟ್ಟಿನ ಮಿಶ್ರಣದಿಂದಲೂ ಉಂಡೆ ಕಟ್ಟಿ. ಕೈಗೆ ಎಣ್ಣೆ, ತುಸು ನೀರು ಸವರಿಕೊಂಡು ಉಂಡೆಯ ಮಿಶ್ರಣವನ್ನು ಅಂಗೈಯಲ್ಲಿಟ್ಟುಕೊಂಡು ನಿಧಾನಕ್ಕೆ ಒತ್ತಿ. ಚಿಕ್ಕ ಚಪಾತಿ ರೀತಿ ಲಟ್ಟಿಸಿಕೊಳ್ಳಿ.ಇದರ ಮಧ್ಯೆ ಬೆಲ್ಲದ ಮಿಶ್ರಣದ ಉಂಡೆ ಇಟ್ಟು ಮೋದಕದ ರೀತಿ ಮಾಡಿಕೊಳ್ಳಿ. ಇದನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಆವಿಯಲ್ಲಿ 10 ನಿಮಿಷಗಳ ಕಾಲ ಬೇಯಸಿಕೊಂಡರೆ ರುಚಿಕರವಾದ ಮೋದಕ ಸವಿಯಲು ಸಿದ್ಧ.