ನವದೆಹಲಿ: ಕೊರೊನಾ ಲಾಕ್ ಡೌನ್ ಕಾರಣದಿಂದ ದೇಶದಲ್ಲಿ ಲಕ್ಷಾಂತರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು, ಸಂಕಷ್ಟದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ನಿರುದ್ಯೋಗ ವಿಮೆ ಜಾರಿಗೊಳಿಸಬೇಕೆಂದು ಕಾರ್ಮಿಕರ ಕುರಿತಾದ ಸಂಸತ್ ಸಮಿತಿ ಶಿಫಾರಸು ಮಾಡಿದೆ.
ಸಂಕಷ್ಟದಲ್ಲಿರುವ ಕಾರ್ಮಿಕರು ಜೀವನ ನಡೆಸುವುದೇ ಕಷ್ಟಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ವಿಮೆ ಸೌಲಭ್ಯವಿದ್ದರೆ ಕಷ್ಟದ ಪರಿಸ್ಥಿತಿ ವೇಳೆ ಕಾರ್ಮಿಕರಿಗೆ ರಕ್ಷಣೆ ದೊರೆಯಲಿದೆ ಎಂದು ಕಾರ್ಮಿಕರ ಕುರಿತಾದ ಸಂಸತ್ ಸಮಿತಿ ಅಧ್ಯಕ್ಷ ಭರ್ತ್ರುಹರಿ ಮಹ್ತಾಬ್ ಹೇಳಿದ್ದಾರೆ.
ಸಾಮಾಜಿಕ ಭದ್ರತೆ ನಿಯಮಾವಳಿಗಳಲ್ಲಿ ನಿರುದ್ಯೋಗ ವಿಮೆ ಸೇರ್ಪಡೆ ಮಾಡಬೇಕಿದೆ. ಇದು ಸರ್ಕಾರದ ಅವಶ್ಯಕವಾಗಿದೆ. ಅಸಂಘಟಿತ ವಲಯದ ಕಾರ್ಮಿಕರು, ಎಸ್ಟೇಟ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರಿಗೆ ನಿರುದ್ಯೋಗ ವಿಮೆ ಸೌಲಭ್ಯ ಜಾರಿ ಮಾಡಬೇಕೆಂದು ಹೇಳಲಾಗಿದೆ.