ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದ ಕಾರಣ ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆಯಷ್ಟೆ ಮೂತ್ರಪಿಂಡದ ಕಸಿ ಮಾಡಲಾಗಿತ್ತು. ಅವರು ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಉತ್ತರ ಪ್ರದೇಶದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದ ಅಮರ್ ಸಿಂಗ್, ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರ ಆಪ್ತರಾಗಿದ್ದರು.
ಅಮರ್ ಸಿಂಗ್ ಪ್ರಸ್ತುತ ಉತ್ತರಪ್ರದೇಶದ ರಾಜ್ಯಸಭಾ ಸಂಸದರಾಗಿದ್ದರು. ಸಮಾಜವಾದಿ ಪಕ್ಷದಿಂದ ಬೇರೆಯಾದ ನಂತ್ರ ಕ್ರಿಯಾಶೀಲತೆ ಕಡಿಮೆಯಾಗಿತ್ತು. ಸ್ವಲ್ಪ ದಿನಗಳ ಕಾಲ ಭಾರತೀಯ ಜನತಾ ಪಕ್ಷಕ್ಕೆ ಹತ್ತಿರವಾಗಿದ್ದರು. 1996 ರಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನ ಶುರು ಮಾಡಿದ್ದರು.
2002 ಮತ್ತು 2008 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅಲ್ಲದೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಕುಟುಂಬದೊಂದಿಗೆ ಅಮರ್ ಸಿಂಗ್ ನಿಕಟ ಸಂಬಂಧವನ್ನು ಹೊಂದಿದ್ದರು. ಕಳೆದ ಕೆಲವು ವರ್ಷಗಳಿಂದ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಕಂಡು ಬಂದಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಅಮರ್ ಸಿಂಗ್ ವಿಡಿಯೋ ಬಿಡುಗಡೆ ಮಾಡುವ ಮೂಲಕ ಅಮಿತಾಬ್ ಬಚ್ಚನ್ ಅವರ ಕ್ಷಮೆಕೋರಿದ್ದರು.