ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಖಾಸಗಿ ಆಸ್ಪತ್ರೆಗಳ ಧನದಾಹಿ ವರ್ತನೆ ಮುಂದುವರೆದಿದ್ದರೆ, ಇತ್ತ ಬೆಡ್ ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೆಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ರೋಗಿಗಳಿಗೆ ಕೆಲವು ಆಸ್ಪತ್ರೆಗಳು ಬೆಡ್ ನೀಡಲು ನಿರಾಕರಿಸುತ್ತಿರುವುದು ದಿನಂಪ್ರತಿ ವರದಿಯಾಗುತ್ತಲೇ ಇವೆ. ಹೀಗಾಗಿ ಇವರ ಆಟಾಟೋಪಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇದೀಗ ಪಾಲಿಕೆ 19 ಆಸ್ಪತ್ರೆಗಳ ಪರವಾನಗಿಯನ್ನು ರದ್ದು ಮಾಡಿದೆ.
ಅನುಗ್ರಹ ವಿಠಲ ಆಸ್ಪತ್ರೆ, ವಿನಾಯಕ ಆಸ್ಪತ್ರೆ, ಪ್ರಶಾಂತ್ ಆಸ್ಪತ್ರೆ, ಬಸವನಗುಡಿಯ ರಾಧಾಕೃಷ್ಣ ಆಸ್ಪತ್ರೆ, ಗುರುಶ್ರೀ ಆಸ್ಪತ್ರೆ, ಕಾಲಭೈರವೇಶ್ವರ ಆಸ್ಪತ್ರೆ, ಪದ್ಮಶ್ರೀ ಆಸ್ಪತ್ರೆ, ಮಾರುತಿ ಆಸ್ಪತ್ರೆ, ಪ್ರೋಮ್ಡ್ ಆಸ್ಪತ್ರೆ, ಎನ್ ಯು ಆಸ್ಪತ್ರೆ, ದೀಪಕ್ ಆಸ್ಪತ್ರೆ, ಸೇವಾಕ್ಷೇತ್ರ ಆಸ್ಪತ್ರೆ, ಪದ್ಮನಾಭ ನಗರದ ಉದ್ಭವ ಆಸ್ಪತ್ರೆ, ಗಂಗೋತ್ರಿ ಆಸ್ಪತ್ರೆ, ಅಕುರಾ ಆಸ್ಪತ್ರೆ ಹಾಗೂ ಬಿಟಿಎಂ ಲೇಔಟ್ನ ಕಾರಂತ್ ಆಸ್ಪತ್ರೆ, ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ, ಟ್ರಿನಿಟಿ ಆಸ್ಪತ್ರೆ ಹಾಗೂ ಮೈಯಾ ಆಸ್ಪತ್ರೆ ಗಳನ್ನು ಪರವಾನಿಗೆಯನ್ನು ರದ್ದು ಮಾಡಲಾಗಿದೆ.
ಪರವಾನಿಗೆ ರದ್ದು ಮಾಡಿ ಆಸ್ಪತ್ರೆಗಳ ಸಿಇಓ ಹಾಗೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇನ್ನು ಹೀಗೆ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವುದಕ್ಕಾಗಿ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳು ಕೆಲಸ ನಿರ್ವಹಿಸುತ್ತವೆ.