ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದ ಬಾಗಿಲು ತೆರೆದಿದೆ. ಪ್ರಮುಖ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ಕ್ಯಾಂಪಸ್ ತೆರೆಯುವ ಸಾಧ್ಯತೆಯಿದೆ. 100 ವಿಶ್ವವಿದ್ಯಾನಿಲಯಗಳಿಗೆ ಕ್ಯಾಂಪಸ್ ಶುರು ಮಾಡಲು ಭಾರತ ಅವಕಾಶ ನೀಡ್ತಿದೆ. ಭಾರತೀಯ ಸರ್ಕಾರದ ಈ ಕ್ರಮಕ್ಕೆ ವಿದೇಶಿ ವಿಶ್ವವಿದ್ಯಾನಿಲಯಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.
ಫ್ರಾನ್ಸ್ ನ ಇಡಿಹೆಕ್ ಬಿಸಿನೆಸ್ ಸ್ಕೂಲ್ ಕಂಟ್ರಿ ಮ್ಯಾನೇಜರ್ ನಿಲೇಶ್ ಗೈಕ್ವಾಡ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಹಳ ಸಮಯದಿಂದ ಕಾಯ್ತಿದ್ದೆವು. ಅಂತಿಮವಾಗಿ ಇದು ಜಾರಿಗೆ ಬರ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.
ಸರ್ಕಾರದ ಈ ನೀತಿ, ಶಿಕ್ಷಣ ಸುಧಾರಣೆಗೆ ಉತ್ತೇಜನ ನೀಡಲಿದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲಿದೆ ಎಂದಿದ್ದಾರೆ. ಭಾರತವನ್ನು ಸಂಶೋಧನಾ ಕೇಂದ್ರವನ್ನಾಗಿ ಪರಿವರ್ತಿಸಲು ಸರ್ಕಾರ ಉತ್ಸುಕವಾಗಿದೆ. ಆದ್ದರಿಂದ ಈ ನಿರ್ಧಾರವು ಅತ್ಯುತ್ತಮವಾದದ್ದನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಜುಲೈ 29 ರಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಅಂಗೀಕರಿಸಲಾಗಿದೆ. ಹೊಸ ಕಾನೂನಿನ ಅಡಿಯಲ್ಲಿ ವಿಶ್ವದ ಅಗ್ರ 100 ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಬಹುದಾಗಿದೆ.
ದಿ ಅಸೋಸಿಯೇಷನ್ ಆಫ್ ಕಾಮನ್ವೆಲ್ತ್ ವಿಶ್ವವಿದ್ಯಾಲಯಗಳ ದಕ್ಷಿಣ ಮತ್ತು ಪೂರ್ವ ಏಷ್ಯಾ ಪ್ರತಿನಿಧಿ ಆದಿತ್ಯ ಮಲ್ಕಾನಿ ಕೂಡ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಸ್ವಾಗತಿಸಿದ್ದಾರೆ. ಈ ನೀತಿ ಹಲವಾರು ಅತ್ಯಾಕರ್ಷಕ ಹೊಸ ಕ್ರಮಗಳನ್ನು ಪರಿಚಯಿಸಿದೆ ಎಂದಿದ್ದಾರೆ.