ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷರು ನೇಮಕವಾದ ಬರೋಬ್ಬರಿ 11 ತಿಂಗಳ ನಂತರ ಬಿಡುಗಡೆ ಮಾಡಲಾಗಿದೆ.
ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಪ್ತರಿಗೆ ಹೆಚ್ಚಿನ ಸ್ಥಾನ ನೀಡಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಣಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ.
ಯಡಿಯೂರಪ್ಪನವರ ಆಪ್ತರ ಸಂಖ್ಯೆ ಪಟ್ಟಿಯಲ್ಲಿ ಕಡಿಮೆ ಇದ್ದು ಅನೇಕ ಅಚ್ಚರಿಯ ಹೆಸರುಗಳು ಸೇರ್ಪಡೆಯಾಗಿವೆ. ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಅನೇಕ ನೇಮಕಾತಿಗಳು ನಡೆದಿದ್ದು ಈ ವೇಳೆ ಪಕ್ಷದ ನಾಯಕರು ಮತ್ತು ಸಂಘಟನೆಯ ಪ್ರಮುಖರನ್ನು ಸಿಎಂ ಯಡಿಯೂರಪ್ಪ ವಿಶ್ವಾಸಕ್ಕೆ ಪಡೆದುಕೊಂಡಿಲ್ಲ ಎನ್ನಲಾಗಿದೆ.
ವಿಧಾನಪರಿಷತ್ ನಾಮನಿರ್ದೇಶನ, ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ವೇಳೆಯಲ್ಲಿ ಪಕ್ಷದ ನಾಯಕರನ್ನು ಕಡೆಗಣಿಸಿದ್ದ ಬಿಜೆಪಿ ಪಟ್ಟಿಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಆಕಾಂಕ್ಷೆಗೆ ಬ್ರೇಕ್ ಹಾಕಲಾಗಿದ್ದು, ಹೆಚ್ಚಿನ ಅಧಿಕಾರ ಇಲ್ಲದ ಹುದ್ದೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಪಟ್ಟಿಯಲ್ಲಿ ಸಂಘಟನೆಯ ಹಿನ್ನೆಲೆಯಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದೇ ರೀತಿ ರಾಜ್ಯಸಭೆಗೆ ಅಚ್ಚರಿ ಆಯ್ಕೆಯಾಗಿದ್ದ ಅಶೋಕ ಗಸ್ತಿ, ಈರಣ್ಣ ಕಡಾಡಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದ ವೇಳೆಯಲ್ಲಿ ಕಡೆಗಣಿಸಲ್ಪಟ್ಟವರಿಗೂ ಹೆಚ್ಚಿನ ಅವಕಾಶ ಸಿಕ್ಕಿದೆ ಎನ್ನಲಾಗಿದೆ.