ಗಾಂಧಿನಗರ: ಕೋವಿಡ್ ಸಂಕಷ್ಟದ ಕಾಲದಲ್ಲಿ ಖಾಸಗಿ ಆಸ್ಪತ್ರೆಯ ಹಣ ಸುಲಿಗೆಯನ್ನು ಕಂಡು ಗುಜರಾತ್ ಉದ್ಯಮಿಯೊಬ್ಬರು ತಮ್ಮ ಕಚೇರಿಯನ್ನೇ ಕೊರೊನಾ ಆಸ್ಪತ್ರೆಯಾಗಿ ಬದಲಿಸಿದ್ದಾರೆ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳು ರೋಗಿಗಳನ್ನು ನಿಭಾಯಿಸಲಾಗದೇ ತೊಂದರೆ ಅನುಭವಿಸುತ್ತಿವೆ. ಇದರಿಂದ ಖಾದರ್ ಶೇಖ್ ಎಂಬ ಭೂ ವ್ಯವಹಾರ ಮಾಡುವ ಉದ್ಯಮಿ 20 ದಿನವನ್ನು ಖಾಸಗಿ ಆಸ್ಪತ್ರೆಯಲ್ಲಿ ಕಳೆದಿದ್ದರು. ಅದರ ಬಿಲ್ ನೋಡಿ ಗಾಬರಿಯಾಗಿದ್ದರು.
“ಖಾಸಗಿ ಆಸ್ಪತ್ರೆಗಳು ದೊಡ್ಡ ಮಟ್ಟದ ಬಿಲ್ ಪಡೆಯುತ್ತಿವೆ. ಬಡವರು ಅದನ್ನು ಹೇಗೆ ತುಂಬಲು ಸಾಧ್ಯ..? ಇದರಿಂದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಏನಾದರೂ ಮಾಡಬೇಕು ಎಂದು ನಾನು ಯೋಜಿಸಿದೆ” ಎಂದು ಶೇಖ್ ಹೇಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದ ಅವರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು 30 ಸಾವಿರ ಚದರ ಅಡಿ ವ್ಯಾಪ್ತಿಯ ತಮ್ಮ ಕಚೇರಿಯನ್ನೇ ಆಸ್ಪತ್ರೆಯ ವಾರ್ಡ್ ಆಗಿ ಬದಲಿಸಿದ್ದಾರೆ.
85 ಬೆಡ್ ಗಳನ್ನು ಖರೀದಿಸಿ ವಿದ್ಯುತ್ ವ್ಯವಸ್ಥೆ ಮಾಡಿದ್ದಾರೆ. ಅವರ ಮನವಿಯಂತೆ ಸರ್ಕಾರ ಅಲ್ಲಿಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಔಷಧವನ್ನು ಒದಗಿಸಿದೆ. ವಾರ್ಡ್ ನಲ್ಲಿ ಯಾವುದೇ ಜಾತಿ, ಮತ, ಧರ್ಮ, ಬೇಧವಿಲ್ಲದೇ ಎಲ್ಲ ಬಡವರಿಗೆ ಉಚಿತ ವ್ಯವಸ್ಥೆ ಇರಲಿದೆ ಎಂದು ಶೇಖ್ ತಿಳಿಸಿದ್ದಾರೆ.