ಬೆಂಗಳೂರು: ಶೇಕಡ 30 ರಷ್ಟು ಪಠ್ಯ ಕಡಿತ ನಿರ್ಧಾರಕ್ಕೆ ಸರ್ಕಾರ ತಡೆ ನೀಡಿದೆ. ಟಿಪ್ಪು ಸುಲ್ತಾನ್ ಮತ್ತು ಸಂವಿಧಾನದ ಬಗ್ಗೆ ಪಠ್ಯ ಕಡಿತ ಮಾಡಿದ ವಿವಾದ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯ ಹಿಂಪಡೆಯಲು ಸರ್ಕಾರ ಸೂಚನೆ ನೀಡಿದೆ ಎಂದು ಹೇಳಲಾಗಿದೆ.
ಶಾಲಾ ಪಠ್ಯದಿಂದ ಟಿಪ್ಪು ಪಾಠ ಕೈಬಿಟ್ಟಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶೇಕಡ 30ರಷ್ಟು ಪಠ್ಯ ಕಡಿತ ಸದ್ಯಕ್ಕೆ ಜಾರಿಗೊಳಿಸದಿರಲು ಚಿಂತನೆ ನಡೆಸಲಾಗಿದೆ. ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದ ಪರಿಷ್ಕೃತ ಪಠ್ಯವನ್ನು ಹಿಂಪಡೆಯಲು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ನಿರ್ದೇಶನ ನೀಡಲಾಗಿದೆ ಎನ್ನಲಾಗಿದೆ.
ಕೊರೋನಾ ಲಾಕ್ ಡೌನ್ ಕಾರಣದಿಂದ ಶೈಕ್ಷಣಿಕ ವರ್ಷದ ಅವಧಿ ಕಡಿಮೆಯಾಗಲಿದ್ದು ಇದಕ್ಕೆ ಅನುಗುಣವಾಗಿ ಪಠ್ಯ ಪರಿಷ್ಕರಿಸಿ ಕಡಿತ ಮಾಡಲಾಗಿತ್ತು. ಹೀಗೆ ಕಡಿತ ಮಾಡುವ ಸಂದರ್ಭದಲ್ಲಿ ಟಿಪ್ಪುಸುಲ್ತಾನ್, ಪ್ರವಾದಿ ಮಹಮದ್, ಜೀಸಸ್, ರಾಣಿ ಅಬ್ಬಕ್ಕ, ಸಂವಿಧಾನ ಮೊದಲ ಪಾಠಗಳನ್ನು ಕೈಬಿಡಲಾಗಿತ್ತು. ಪರಿಷ್ಕೃತ ಪಠ್ಯವನ್ನು ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು ಈಗ ಈ ನಿರ್ಧಾರಕ್ಕೆ ಸರ್ಕಾರ ತಡೆ ನೀಡಿದೆ ಎಂದು ಹೇಳಲಾಗಿದೆ.
ಶೈಕ್ಷಣಿಕ ವರ್ಷದ ಅವಧಿ ನಿಗದಿಯಾಗದ ಕಾರಣ ಪಠ್ಯ ಅಂತಿಮಗೊಳಿಸಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗಿಲ್ಲ. ಎಷ್ಟು ದಿನಗಳು ದೊರೆಯುತ್ತವೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಈಗಲೇ ಪಠ್ಯ ಅಂತಿಮಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಲ್ಲಿ ಎಷ್ಟು ದಿನಗಳು ಲಭ್ಯವಾಗುತ್ತವೆ ಎನ್ನುವುದರ ಆಧಾರದ ಮೇಲೆ ಪಠ್ಯವನ್ನು ನಿಗದಿ ಮಾಡುವುದು ವೈಜ್ಞಾನಿಕ ವಿಧಾನವಾಗಿದೆ. ಅನಗತ್ಯವಾಗಿ ಪಠ್ಯ ಕಡಿತ ಮಾಡುವುದಿಲ್ಲ. ಗೊಂದಲಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.