ಪಿಎಂ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಲಾಗಿದೆ. ಇಡೀ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಒಂದೇ ಒಂದು ನಿಯಂತ್ರಕ ಸಂಸ್ಥೆ ಇರಲಿದೆ. ಶಿಕ್ಷಣ ಕ್ಷೇತ್ರದಲ್ಲಿನ ಗೊಂದಲವನ್ನು ಹೋಗಲಾಡಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 21 ನೇ ಶತಮಾನದ ಹೊಸ ಶಿಕ್ಷಣ ನೀತಿಗೆ ಸಂಪುಟ ಅನುಮೋದನೆ ನೀಡಿದೆ. ಕಳೆದ 34 ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಇದಕ್ಕೂ ಮೊದಲೇ ಈ ನೀತಿಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು ತನ್ನ ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಬದಲಾಯಿಸುವಂತೆ ಶಿಫಾರಸು ಮಾಡಿತ್ತು. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಇದನ್ನು ಅಂಗೀಕರಿಸಲಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1986 ರಲ್ಲಿ ರೂಪಿಸಿತ್ತು. 1992 ರಲ್ಲಿ ಪರಿಷ್ಕರಿಸಲಾಗಿತ್ತು. ಹಿಂದಿನ ನೀತಿ ಸಿದ್ಧಪಡಿಸಿ ಮೂರು ದಶಕಗಳಿಗಿಂತಲೂ ಹೆಚ್ಚು ಸಮಯ ಕಳೆದಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶಕ್ಕೆ ಹೊಸ ಶಿಕ್ಷಣ ನೀತಿ ಬೇಕಿತ್ತು. ಕೆಲವು ರಾಜ್ಯಗಳಲ್ಲಿ ಹಿಂದಿ ಹೇರಿಕೆ ಬಗ್ಗೆ ಆತಂಕವಿದೆ. ಆದರೆ ಭಯ ಬೇಡವೆಂದು ಮಾನವ ಸಂಪನ್ಮೂಲ ಸಚಿವಾಲಯ ಭರವಸೆ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಪಿಎಂ ಮೋದಿಯವರು ಪರಿಶೀಲಿಸಿದ ನಂತರ ಜಾರಿಗೆ ತರಲಾಗುವುದು, ಗುಣಮಟ್ಟದ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಸುಧಾರಣೆ, ಬಹು ಭಾಷೆಗೆ ಆಧ್ಯತೆ, 21 ನೇ ಶತಮಾನದ ಕೌಶಲ್ಯಗಳು, ಕ್ರೀಡೆ ಮತ್ತು ಕಲೆಗಳನ್ನು ಶಿಕ್ಷಣದಲ್ಲಿ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.