ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗೆಂದು ಈ ಕ್ಷೇತ್ರ ಆಯ್ಕೆ ಮಾಡಿಕೊಂಡ ದರ್ಶ್ ಚಂದ್ರಪ್ಪ ಈಗ ಇದೇ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕಟ್ಟುಮುಟ್ಟಾದ ದೇಹ ಜತೆಗೆ ಅದಕ್ಕೆ ತಕ್ಕನಾದ ಎತ್ತರವಿರುವ ಇವರನ್ನು ನೋಡಿದವರೆಲ್ಲರೂ ಮಾಡೆಲಿಂಗ್ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎನ್ನುತ್ತಿದ್ದರಂತೆ. ಹವ್ಯಾಸಕ್ಕಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟು ಈಗ ಕಿರುತೆರೆಯಲ್ಲೂ ಇವರು ಮನೆಮಾತಾಗಿದ್ದಾರೆ.
5 ವರ್ಷದ ಹಿಂದೆ ಈ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿತ್ತು. ವಾರಕ್ಕೊಂದು ಶೋ, ಜತೆಗೆ ಬ್ರಾಂಡ್ ಗಳ ಶೋ ಪ್ರತಿನಿತ್ಯ ಇದ್ದ ಹಾಗೇ ಇತ್ತು. ದೂರದ ಮುಂಬೈನ ಮಾಡೆಲ್ ಗಳು ಕೂಡ ಬೆಂಗಳೂರಿನತ್ತ ಬರುತ್ತಿದ್ದರು. ಅಷ್ಟು ಚೆನ್ನಾಗಿತ್ತು ಬೆಂಗಳೂರಿನ ಫ್ಯಾಷನ್ ಜಗತ್ತು.
ಆದರೆ ಈಗ ಕೊರೊನಾ ಕಾರಣದಿಂದ ಮಾಡೆಲಿಂಗ್ ನಲ್ಲಿ ಅಷ್ಟು ಅವಕಾಶವಿಲ್ಲ. ಅವಕಾಶಕ್ಕಿಂತ ಹೆಚ್ಚು ಈಗ ಮಾರ್ಕೆಟ್ ಇಲ್ಲ. ಯಾವುದೇ ಶೋ ಕೂಡ ಈಗ ನಡೆಯುತ್ತಿಲ್ಲ. ನೂರು ಶೂಟ್ ಆಗುವ ಕಡೆ ಈಗ ಒಂದು ಶೂಟ್ ಆಗ್ತಿದೆ. ಮಾಡೆಲಿಂಗ್ ಅನ್ನೇ ನಂಬಿಕೊಂಡಿರುವವರಿಗೆ ಸ್ವಲ್ಪ ಕಷ್ಟವಾಗಿದೆ. ಯಾವುದ್ಯಾವುದೋ ಊರಿಂದ ಕನಸು ಕಟ್ಟಿಕೊಂಡು ಇಲ್ಲಿಗೆ ಬಂದಿರುತ್ತಾರೆ. ಆದರೆ ಈಗ ಯಾವುದೇ ರೀತಿಯ ಮಾರ್ಕೆಟ್ ಇಲ್ಲದೇ ಇರುವ ಕಾರಣ ಎಲ್ಲರೂ ತಮ್ಮ ತಮ್ಮ ಊರಿಗೆ ವಾಪಸ್ ಹೋಗಿದ್ದಾರೆ. ದುಡ್ಡು ಇದ್ದರೆ ಮಾತ್ರ ಜೀವನ ನಡೆಸುವುದಕ್ಕೆ ಸಾಧ್ಯ. ಮಾಡೆಲ್ ಗಳಿಗೆ ದುಡಿಮೆಯೇ ಇಲ್ಲದಂತಾಗಿದೆ ಇವಾಗ.
ಮಾಡೆಲ್ ಆಗಬೇಕು ಎಂಬ ಕನಸು ಇಟ್ಟುಕೊಂಡು ಈ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಬದುಕು ನಡೆಸುವುದಕ್ಕೆ ಇನ್ನೊಂದು ಕೆಲಸ ನಂಬಿಕೊಂಡೇ ಇಲ್ಲಿಗೆ ಬನ್ನಿ. ಇದು ಒಂದನ್ನೇ ನಂಬಿಕೊಂಡು ಬರಬೇಡಿ ಎಂದು ಕಿರಿಯರಿಗೆ ಕಿವಿಮಾತು ಹೇಳುತ್ತಾರೆ ದರ್ಶ್.