ಜಪಾನ್ ನಾಯಕರ ಮಾದರಿಯಲ್ಲಿ ಬಿಟ್ಟಿದ್ದ ಮೀಸೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸೌತ್ ಕೊರಿಯಾದಲ್ಲಿರುವ ಅಮೆರಿಕ ರಾಯಭಾರಿ ಹ್ಯಾರಿ ಹ್ಯಾರಿಸನ್ ಅದನ್ನು ಬೋಳಿಸಿದ್ದಾರೆ.
“ಟೀಕೆ ಬಂದ ಕಾರಣಕ್ಕೆ ಮೀಸೆ ತೆಗೆದಿದ್ದಲ್ಲ. ಕೊರೊನಾ ವೈರಸ್ ನಿಂದ ಬಚಾವಾಗಲು ಮಾಸ್ಕ್ ಧರಿಸಬೇಕಿದೆ. ಸೌತ್ ಕೊರಿಯಾದಲ್ಲಿ ಸಾಕಷ್ಟು ಸೆಕೆ ಇದ್ದು, ತೇವ ಉಂಟಾಗಿ ಕಷ್ಟವಾಗುತ್ತಿದೆ” ಎಂದು ಹೇಳಿದ್ದಾಗಿ ಸಿಎನ್ಎನ್ ವರದಿ ಮಾಡಿದೆ.
ಸೆಕೆ ಹಾಗೂ ತೇವಾಂಶದಿಂದ ತೊಂದರೆ ಉಂಟಾಗುತ್ತಿದ್ದು, ಮೀಸೆ ತೆಗೆಯುವಂತೆ ಹ್ಯಾರಿ ಅವರು ಕ್ಷೌರಿಕನಿಗೆ ಸೂಚಿಸುವ ವಿಡಿಯೋವನ್ನು ಯುಎಸ್ ಎಂಬಸಿ ಸಿಯೋಲ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.
ರಾಯಭಾರ ಕಚೇರಿಯ ಹಿರಿಯರಾದ ಸ್ಕಿಮ್ಸಿ ಹಾಗೂ ಯುಎಸ್ ಎಂಬರ್ಕ್ ಎಂಬುವವರ ಸಲಹೆಯಂತೆ ಹ್ಯಾರಿ ಸ್ಥಳೀಯ ಕ್ಲಾಸಿಕ್ ಬಾರ್ಬರ್ ಶಾಪ್ ಗೆ ತೆರಳಿ ಮೀಸೆ ತೆಗೆದು ಕೂದಲಿಗೆ ಕಲರಿಂಗ್ ಮಾಡಿಸಿದ್ದಾರೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
1910 ರಿಂದ 1945 ರವರೆಗೆ ಸೌತ್ ಕೊರಿಯಾ ಜಪಾನ್ ವಶದಲ್ಲಿತ್ತು. ಇದರಿಂದ ಜಪಾನ್ ಬಗ್ಗೆ ಕೊರಿಯಾ ನಾಗರಿಕರಲ್ಲಿ ಆಕ್ಷೇಪವಿದೆ. ಈಗ ರಾಯಭಾರಿ ಜಪಾನಿ ನಾಯಕರ ಮಾದರಿಯಲ್ಲಿ ಮೀಸೆ ಬಿಟ್ಟ ಬಗ್ಗೆ ಕೊರಿಯಾದ ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ಕಳೆದ ಜನವರಿಯಲ್ಲಿ ಟೀಕೆ ವ್ಯಕ್ತವಾಗಿತ್ತು.