ಕೊರೊನಾ ವೈರಸ್ ಸಂಬಂಧ ಫೋಬಿಯಾಗಳು ಸಾಕಷ್ಟು ಹರಡಿದ್ದು, ಜನರಲ್ಲಿ ಅನಗತ್ಯ ಭೀತಿ ನೆಲೆಸಿದೆ. ಕೊರೊನಾ ಬಂದು ವಾಸಿಯಾಗಿ ಮನೆಗೆ ಮರಳಿದವರನ್ನು ಅಸ್ಪೃಶ್ಯರ ಥರ ನೋಡುವ ಖಯಾಲಿ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ.
ಹೈದರಾಬಾದ್‌ನ ಫಿಲಂನಗರ ಪ್ರದೇಶದಲ್ಲಿ ಕೊರೊನಾ ವೈರಸ್ ಬಂದು ಕ್ವಾರಂಟೈನ್‌ನಲ್ಲಿ ಇದ್ದು ಬಂದ ತಾಯಿಗೆ ಆಕೆಯ ಮಗ ಹಾಗೂ ಸೊಸೆ ಮನೆಗೆ ಸೇರಿಸದ ಕಾರಣ, 55 ವರ್ಷದ ಆಕೆ ರಾತ್ರಿಯೆಲ್ಲಾ ರಸ್ತೆ ಬದಿಯಲ್ಲೇ ಕಾಲ ಕಳೆಯಬೇಕಾಗಿ ಬಂದಿದೆ. ಈ ಮಹಿಳೆಗೆ ನಗರದ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮೊದಲೇ ಸೋಂಕಿನ ವಿರುದ್ಧ ಹೋರಾಡಿ ಬಂದು ಆತ್ಮಸ್ಥೈರ್ಯವನ್ನು ಮರಳಿ ಪಡೆದುಕೊಳ್ಳಲು ನೋಡುತ್ತಿದ್ದ ಈ ಮಹಿಳೆಗೆ, ಆಕೆಯ ಮಗ ಹಾಗೂ ಸೊಸೆ ಮನೆ ಬಾಗಿಲು ಲಾಕ್ ಮಾಡಿಕೊಂಡು ಹಿಂಬದಿಯ ಬಾಗಿಲು ತೆರೆದು ಅಲ್ಲಿಂದ ಪರಾರಿಯಾಗುವ ಮೂಲಕ ಇನ್ನಷ್ಟು ನೋವು ಕೊಟ್ಟಿದ್ದಾರೆ. ತನ್ನ ಅಸಹಾಯಕ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ವಿವರಿಸಿದ ಇವರು, ತಮಗೆ ನ್ಯಾಯ ಕೊಡಿಸುವಂತೆ ಕೋರಿಕೊಂಡಿದ್ದಾರೆ.