ಬೆಂಗಳೂರು: ಕರ್ನಾಟಕ ಮತ್ತು ಕೇರಳ ಐಸಿಸ್ ಉಗ್ರರ ನೆಲೆಯಾಗಿ ರೂಪಗೊಳ್ಳುತ್ತಿದೆ ಎನ್ನುವ ಆತಂಕಕಾರಿ ಸಂಗತಿಯನ್ನು ವಿಶ್ವಸಂಸ್ಥೆ ವರದಿ ಬಹಿರಂಗಪಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಗೃಹ ಇಲಾಖೆ ಕೇಂದ್ರದ ವಿವಿಧ ಸಂಸ್ಥೆಗಳು, ನೆರೆ ರಾಜ್ಯಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಸಂಶಯಾಸ್ಪದ ಚಟುವಟಿಕೆಗಳನ್ನು ನಡೆಸುತ್ತಿರುವವರ ಬಗ್ಗೆ ಮತ್ತು ಅವರ ಬೆಂಬಲಿಗರ ಬಗ್ಗೆ ತೀವ್ರ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಭಯೋತ್ಪಾದಕರ ಬಗ್ಗೆ ವಿಶ್ವಸಂಸ್ಥೆಯ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ 2020 ರ ಜನವರಿಯಲ್ಲಿ ಆಲ್ ಹಿಂದ್ ಎಂಬ ಭಯೋತ್ಪಾದಕ ಗುಂಪಿನ ವಿರುದ್ಧ ಕ್ರಮಕೈಗೊಂಡು ಹಲವರನ್ನು ಬಂಧಿಸಲಾಗಿದೆ. ಜೆಎಂಬಿ ಎಂಬ ಭಯೋತ್ಪಾದಕರ ಗುಂಪಿನ ಹಲವರನ್ನು 2018 – 19 ರಲ್ಲಿ ಬಂಧಿಸಲಾಗಿದ್ದು, ಈ ಎರಡು ಗುಂಪುಗಳ ಪ್ರಕರಣಗಳನ್ನು ಎನ್ಐಎಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆಂತರಿಕ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ತೀರ್ಮಾನಿಸಲಾಗಿದ್ದು ಸಂಪೂರ್ಣ ವರದಿ ನೀಡುವಂತೆ ಡಿಜಿಪಿಗೆ ಸೂಚಿಸಲಾಗಿದೆ. ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಇತ್ತೀಚೆಗೆ ನಡೆದ ಡಿಜಿಪಿಗಳ ಸಮ್ಮೇಳನದಲ್ಲಿ ಚರ್ಚಿಸಿ ಎಲ್ಲ ರಾಜ್ಯಗಳಲ್ಲಿ ಹಲವಾರು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ರಾಜ್ಯ ಗೃಹ ಇಲಾಖೆ ವಿವಿಧ ರೂಪದಲ್ಲಿ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬರುವಂತಹ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ಸೂಚಿಸಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವ ಸಂಘಟನೆಗಳ ಬಗ್ಗೆ ನಿಗಾ ವಹಿಸಲಾಗಿದೆ. ಕಾಲಕಾಲಕ್ಕೆ ಬೇರೆ ಬೇರೆ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಗುಂಪುಗಳು, ಚಟುವಟಿಕೆಗಳ ಮೇಲೆ ಸರ್ಕಾರ ತೀವ್ರ ನಿಗಾ ಇಡುವುದನ್ನು ಮುಂದುವರಿಸಲಿದೆ ಎಂದು ಹೇಳಿದ್ದಾರೆ.