
ಸದ್ಯ ಕೊರೊನಾ ವೈರಸ್ ಭಯದಲ್ಲಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ವಿಶೇಷವಾಗಿ ನಗರ ಪ್ರದೇಶದ ಜನರು ಬ್ಯಾಂಕ್ ವ್ಯವಹಾರವನ್ನು ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೆಚ್ಚಿಕೊಂಡಿದ್ದಾರೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಿಂದ ಇಎಂಐ ಪಾವತಿ ಮತ್ತು ಹಣ ವರ್ಗಾವಣೆಯವರೆಗೆ ಜನರು ಇ ಬ್ಯಾಂಕಿಂಗ್ ಸೇವೆ ನೆಚ್ಚಿಕೊಂಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಇ ಬ್ಯಾಂಕಿಂಗ್ ಸೇವೆ ಸುರಕ್ಷಿತವಲ್ಲ. ಗ್ರಾಹಕರು ನೆಟ್ ಬ್ಯಾಂಕಿಂಗ್ ಸೇವೆ ಬಳಸುವ ವೇಳೆ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಹೆಚ್ಚಿನ ಬ್ಯಾಂಕ್ ಗಳು ಡಿಜಿಟಲ್ ಬ್ಯಾಂಕ್ ಸೇವೆಯನ್ನು ಸುಲಭಗೊಳಿಸಿರುವ ಕಾರಣ ವಂಚನೆ ಪ್ರಕರಣಗಳು ಹೆಚ್ಚಾಗಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ತನ್ನ ಗ್ರಾಹಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ನೆಟ್ ಬ್ಯಾಂಕಿಂಗ್ ಬಳಸುವ ವೇಳೆ ಮೋಸ, ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ ಎಂದು ಬ್ಯಾಂಕ್ ಹೇಳಿದೆ. ಲಾಗಿನ್, ಹೋಮ್ ಪೇಜ್ ನಲ್ಲಿರುವ ಲಾಕ್/ಅನ್ಲಾಕ್ ಬಳಸಿ ಖಾತೆಯನ್ನು ರಕ್ಷಿತವಾಗಿಟ್ಟುಕೊಳ್ಳಿ ಎಂದು ಬ್ಯಾಂಕ್ ಹೇಳಿದೆ.
ಮೊದಲು onlinesbi.com. ಗೆ ಹೋಗಬೇಕು. ಅಲ್ಲಿ ಲಾಕ್/ಅನ್ಲಾಕ್ ಯೂಸರ್ ಆಯ್ಕೆಯನ್ನು ಕಾಣುತ್ತೀರಿ. ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರ ಹೆಸರು, ಖಾತೆ ಸಂಖ್ಯೆಯನ್ನು ಹಾಕಬೇಕು. ಡ್ರಾಪ್-ಡೌನ್ ಮೆನುವಿನಲ್ಲಿ Lock user access ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಷರತ್ತುಗಳನ್ನು ಓದಿ ಓಕೆ ಬಟನ್ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿದ ನಂತ್ರ ಇಂಟರ್ನೆಟ್ ಬ್ಯಾಂಕಿಂಗ್ ಲಾಕ್ ಆಗುತ್ತದೆ. ಅನ್ಲಾಕ್ ಮಾಡಲು ಬಯಸಿದ್ದರೆ ಅದೇ ವೆಬ್ಸೈಟ್ ಅಥವಾ ಶಾಖೆಗೆ ಹೋಗಿ ಮಾಡಬೇಕು. ನೀವು ಅನ್ಲಾಕ್ ಬ್ಯಾಂಕ್ ಮೂಲಕ ಮಾಡ್ತಿದ್ದರೆ ಹೋಮ್ ಬ್ರ್ಯಾಂಚ್ ಗೆ ಹೋಗಬೇಕಾಗುತ್ತದೆ. ಇದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.