ಭೀಮಾ ತೀರದಲ್ಲಿ ನಡೆಯುವ ಘಟನೆಗಳು ಹಿಂದೆ ನಡೆದಿದ್ದ ಘಟನೆಗಳ ಬಗ್ಗೆ ತಿಳಿದೇ ಇದೆ. ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಗುಂಡಿನ ಶಬ್ಧ, ಕೊಲೆ, ಅಪಹರಣ ಪ್ರಕರಣಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಇತ್ತೀಚೆಗೂ ಕೂಡ ಭೀಮಾ ತೀರದಲ್ಲಿ ನಡೆದ ಘಟನೆಯೊಂದು ಸದ್ದು ಮಾಡುತ್ತಿದೆ.
ವಿಜಯಪುರ ಜಿಲ್ಲೆಯ ಇಂಡಿ ಚಿನ್ನದ ವ್ಯಾಪಾರಿಗೆ ಇಂಡಿ ಪಟ್ಟಣದ ಉದ್ಯಮಿ ಲಕ್ಷ್ಮೀಕಾಂತ ಪಾಟೀಲ, ಭೀಮಾತೀರದ ಹಂತಕ ಚಂದಪ್ಪ ಹರಿಜನ ಅವರ ಬಲಗೈ ಬಂಟನಾಗಿದ್ದ ಭಾಗಪ್ಪ ಹರಿಜನ ಮತ್ತು ಭೀಮಾತೀರದ ಮುಖಂಡ ಮಹಾದೇವ ಸಾಹುಕಾರ್ ಭೈರಗೊಂಡ ದುಡ್ಡಿಗಾಗಿ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದರು. ಈ ಸಂಬಂಧ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ.
ಆದರೆ ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಒಂದು ಸಿಕ್ಕಿದೆ. ಈ ಪ್ರಕರಣದ ಮೊದಲ ಆರೋಪಿ ಲಕ್ಷ್ಮಿಕಾಂತ ಪಾಟೀಲ ಯಾವುದೋ ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋದಲ್ಲಿ ಘಟನೆಯ ಬಗ್ಗೆ ಸಂಪೂರ್ಣವಾಗಿ ಹೇಳಿದ್ದಾನೆ. ಅಷ್ಟೆ ಅಲ್ಲ ಚಿನ್ನದ ವ್ಯಾಪಾರಿ ನಾಮದೇವ ಶಿ. ಡಾಂಗೆ ವಿರುದ್ಧ ಹರಿಹಾಯ್ದಿದ್ದಾನೆ.
ಈ ವಿಡಿಯೋದಲ್ಲಿ ಮಾತನಾಡಿರುವ ಲಕ್ಷ್ಮಿಕಾಂತ ಪಾಟೀಲ, ನಾನು ಯಾವ ತಪ್ಪನ್ನು ಮಾಡಿಲ್ಲ. ನನ್ನ ತಾಯಿ ಆಣೆ ನಾನು ಚಿನ್ನದ ವ್ಯಾಪಾರಿ ಬಳಿ ಹಣ ಕೇಳಿಲ್ಲ. ಜೀವ ಬೆದರಿಕೆ ಹಾಕಿಲ್ಲ. ನನ್ನ ಶಕ್ತಿಯಿಂದ ಚೆನ್ನಾಗಿ ದುಡಿದು ಹಣ ಸಂಪಾದನೆ ಮಾಡಿದ್ದೇನೆ. ಚಿನ್ನದ ವ್ಯಾಪಾರಿಗೆ ಬೆದರಿಕೆ ಹಾಕಿ ಹಣ ಪಡೆಯುವ ಗೋಜಿಗೆ ಹೋಗಿಲ್ಲ. ಹಾಗೇನಾದರೂ ಮಾಡಿದ್ದರೆ ನನಗೆ ಇಂದೇ ಸಾವು ಬರಲಿ ಎಂದೆಲ್ಲಾ ಮಾತನಾಡಿದ್ದಾನೆ.