ಅಮೆರಿಕ ಖಂಡಕ್ಕೆ ಮಾನವರು ಆಗಮಿಸಿದ ಇತಿಹಾಸದ ಕುರಿತಂತೆ ಅನೇಕ ಆಂತ್ರಪಾಲಜಿಸ್ಟ್‌ಗಳು ಸಾಕಷ್ಟು ಅಧ್ಯಯನ ನಡೆಸುತ್ತಲೇ ಇದ್ದಾರೆ. 15 ಸಾವಿರ ವರ್ಷಗಳ ಹಿಂದೆ ಕ್ಲೋವಿಸ್ ಜನರು ಮೊದಲ ಬಾರಿಗೆ ಈ ಖಂಡಕ್ಕೆ ಆಗಮಿಸಿದರು ಎಂದು ಸಾಮಾನ್ಯವಾಗಿ ನಂಬಲಾಗಿದೆ.
ಆದರೆ ಮೆಕ್ಸಿಕೋದಲ್ಲಿ 26,000 ವರ್ಷಗಳಷ್ಟು ಹಳೆಯದಾದ ಸುಮಾರು 2,000 ಕಲ್ಲಿನ ಉಪಕರಣಗಳನ್ನು ಪುರಾತತ್ವ ಇಲಾಖೆ ತಜ್ಞರು ಕಂಡುಹಿಡಿದಿದ್ದಾರೆ. ಈ ಉಪಕರಣಗಳು ಕಂಡು ಬಂದ ಗುಹೆಯನ್ನು ಮಾನವರು ಕನಿಷ್ಠ 20,000 ವರ್ಷಗಳ ಮಟ್ಟಿಗೆ ಬಳಸುತ್ತಿದ್ದರು ಎನ್ನಲಾಗಿದೆ.
ಪೂರ್ವ ಏಷ್ಯಾದಿಂದ ಈ ಕ್ಲೋವಿಸ್ ಜನಾಂಗವು ಸೈಬೀರಿಯಾ-ಅಲಾಸ್ಕಾ ನಡುವೆ ಇದ್ದ ಭೂಸೇತುವಿನ ಮೂಲಕ 15 ಸಾವಿರ ವರ್ಷಗಳ ಹಿಂದೆ, ಅಂದರೆ ಐಸ್ ಯುಗದಲ್ಲಿ ಬಂದಿದ್ದಾರೆ ಎಂದು ನಂಬಲಾಗಿದೆ. ವಾತಾವರಣದಲ್ಲಿ ಉಂಟಾದ ಬದಲಾವಣೆ ಕಾರಣ ಮಂಜುಗಡ್ಡೆಯು ಕರಗಿ ಈ ಭೂಸೇತು ಸಮುದ್ರದ ತಳ ಸೇರಿದೆ ಎಂದು ತಜ್ಞರು ತಿಳಿಸುತ್ತಾರೆ.
ಆದರೆ ಮೆಕ್ಸಿಕೋದಲ್ಲಿ ಪತ್ತೆಯಾದ ಈ ಗುಹೆಯನ್ನು ಅಧ್ಯಯನ ಮಾಡಿದ ತಜ್ಞರು, ಸುಮಾರು 30 ಸಾವಿರ ವರ್ಷಗಳ ಹಿಂದೆಯೇ ಈ ಖಂಡಕ್ಕೆ ಮಾನವರು ಆಗಮಿಸಿದ್ದರು ಎನ್ನುತ್ತಿದ್ದಾರೆ. ಉತ್ತರ ಮೆಕ್ಸಿಕೋದ ಚಿಕೈಟ್ ಗುಹೆ ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಪುರಾತತ್ವ ಇಲಾಖೆ ತಜ್ಞರು ಈಗ ಬಹಳಷ್ಟು ಶೋಧ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಇನ್ನಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.