ಸುಳ್ಳು ಮರಣ ಪ್ರಮಾಣ ಪತ್ರವೊಂದನ್ನು ಸೃಷ್ಟಿಸಿ, ತಾನು ಬದುಕೇ ಇಲ್ಲವೆಂದು ತೋರಿಸಿಕೊಂಡು, ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನೋಡಿದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಿಕ್ಕಿಬಿದ್ದಿದ್ದಾನೆ.
ನ್ಯೂಯಾರ್ಕ್ನ ಹಂಟಿಂಗ್ಟನ್ ಪ್ರದೇಶದ 25 ವರ್ಷ ವಯಸ್ಸಿನ ರಾಬರ್ಟ್ ಬರ್ಗರ್ ಹಸರಿನ ವ್ಯಕ್ತಿ ಲೆಕ್ಸಸ್ ಕಾರನ್ನು ಕದ್ದಿದ್ದಲ್ಲದೇ ಟ್ರಕ್ ಒಂದನ್ನು ಸಹ ಲೂಟಿ ಮಾಡುವ ಯತ್ನದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿ ಶಿಕ್ಷೆಗೆ ಗುರಿಯಾಗಿದ್ದ.
ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಾನು ಸತ್ತೇ ಹೋಗಿದ್ದೇನೆಂದು ಸಾಬೀತು ಮಾಡಲು ಮರಣ ಪ್ರಮಾಣಪತ್ರವೊಂದನ್ನು ಸುಳ್ಳಾಗಿ ತಯಾರಿಸಿದ್ದ. ಆದರೆ ಆತನ ದುರದೃಷ್ಟಕ್ಕೆ ಆ ಪ್ರಮಾಣ ಪತ್ರದಲ್ಲಿ ಸ್ಪೆಲ್ಲಿಂಗ್ ತಪ್ಪಾಗಿದ್ದ ಕಾರಣ ಸಿಕ್ಕಿಹಾಕಿಕೊಂಡಿದ್ದಾನೆ ರಾಬರ್ಟ್. ತನ್ನನ್ನು ತಾನೇ ಕೊಂದುಕೊಂಡಿದ್ದೇನೆ ಎಂದು ಹೇಳಿಕೊಂಡು ತನ್ನ ಮನದನ್ನೆಯ ಮುಖಾಂತರ ಈ ಪ್ರಮಾಣ ಪತ್ರವನ್ನು ಕೋರ್ಟ್ಗೆ ತಲುಪಿಸಿದ್ದ ರಾಬರ್ಟ್. ಇದರ ಬೆನ್ನಿಗೇ ಆರು ತಿಂಗಳ ಮಟ್ಟಿಗೆ ನಾಪತ್ತೆಯಾಗಿದ್ದ ರಾಬರ್ಟ್. ಇದೀಗ ಕಳ್ಳತನದ ಅಪರಾಧಕ್ಕೆ ವಿಧಿಸಿದ್ದ ಶಿಕ್ಷೆಯೊಂದಿಗೆ, ಈ ಫೋರ್ಜರಿ ಮಾಡಿದ ಆರೋಪಕ್ಕೆ ನಾಲ್ಕು ವರ್ಷ ಹೆಚ್ಚುವರಿ ಜೈಲು ವಾಸವನ್ನು ಪೂರೈಸಬೇಕಾದ ಪರಿಸ್ಥಿತಿ ತಲುಪಿದ್ದಾನೆ ರಾಬರ್ಟ್.