ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ದ್ವಿತೀಯ ಪಿಯುಸಿಯಲ್ಲಿ 99.2% ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಲೋಹರವ ಗ್ರಾಮದ ಈ ವಿದ್ಯಾರ್ಥಿಯ ಹೆಸರು ಪ್ರಕಾಶ್ ಫುಲ್ವಾರಿಯಾ. ತಂದೆ ಚನ್ನಾ ರಾಮ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಇದೀಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇದಿದ್ದರಿಂದ ಟಾರ್ಚ್ ಬೆಳಕಲ್ಲೇ ಪರೀಕ್ಷೆಗೆ ಓದಿ ಈ ಸಾಧನೆಯನ್ನು ಪ್ರಕಾಶ್ ಮಾಡಿದ್ದಾರೆ.
ಇತಿಹಾಸ ಮತ್ತು ಹಿಂದಿ ಭಾಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿರುವ ಪ್ರಕಾಶ್, ಹಿಂದಿ ಸಾಹಿತ್ಯದಲ್ಲಿ 99, ಪೊಲಿಟಿಕಲ್ ಸೈನ್ಸ್ನಲ್ಲಿ 98 ಅಂಕಗಳಿಸಿದ್ದಾನೆ. ಇದಕ್ಕೂ ಮೊದಲು ಈತನ ಸಹೋದರಿಯೂ ಶೇ. 88 ಅಂಕ ಗಳಿಸಿದ್ದಳು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಫೇಮಸ್ ಆಗಿರುವ ಪ್ರಕಾಶ್, ಮುಂದಿನ ದಿನದಲ್ಲಿ ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಕನಸು ಹೊತ್ತಿದ್ದಾರೆ.