ಭಾರತ, ಅಮೆರಿಕ, ಬ್ರಿಟನ್, ರಷ್ಯಾ ಮೊದಲಾದ ಕಡೆಗಳಲ್ಲಿ ಕೊರೋನಾ ತಡೆ ಲಸಿಕೆ ಅಂತಿಮ ಹಂತದ ಪ್ರಯೋಗಗಳು ನಡೆಯುತ್ತಿದ್ದು, 2 ಹಂತದ ಪರೀಕ್ಷೆ ಯಶಸ್ವಿಯಾಗಿವೆ. ಅಂತಿಮ ಹಂತದ ಪ್ರಯೋಗ ನಡೆದು ಲಸಿಕೆ ಯಶಸ್ವಿಯಾಗಿ ಶೀಘ್ರವೇ ಬಿಡುಗಡೆಯಾಗಬಹುದೆನ್ನುವ ನಿರೀಕ್ಷೆ ಇತ್ತು. ಆದರೆ, ವಿಶ್ವ ಆರೋಗ್ಯ ಸಂಸ್ಥೆ (WHO) ಕೊರೋನಾಗೆ ಇದೇ ವರ್ಷ ಲಸಿಕೆ ಸಿಗುವುದು ಕಷ್ಟಸಾಧ್ಯವೆಂದು ಹೇಳಿದೆ.
ಈ ವರ್ಷಾಂತ್ಯಕ್ಕೆ ಇಲ್ಲವೇ 2021ರ ಆರಂಭದವರೆಗೆ ಕೊರೋನಾ ಲಸಿಕೆ ಸಿಗುವುದು ಕಷ್ಟವೆಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಕೊನೆಯ ಹಂತದ ಪ್ರಯೋಗ ನಡೆಯುತ್ತಿರುವುದು ಬೆರಳೆಣಿಕೆಯಷ್ಟು ಮಾತ್ರ. ಮೊದಲ ಬಳಕೆಯನ್ನು 2021ರ ಆರಂಭದವರೆಗೆ ನಿರೀಕ್ಷಿಸಲಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಲಸಿಕೆ ಪ್ರಯೋಗ ಯಶಸ್ವಿಯಾಗಿ ಅದು ಬಿಡುಗಡೆಯಾದ ನಂತರ ನ್ಯಾಯಯುತವಾಗಿ ಲಸಿಕೆ ವಿತರಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಮಧ್ಯೆ ವೈರಸ್ ಹರಡುವುದನ್ನು ನಿಗ್ರಹಿಸುವುದು ಮುಖ್ಯವಾಗಿದೆ ಎಂದು ಹೇಳಲಾಗಿದೆ.
ಕೊರೋನಾ ಸೋಂಕು ಹರಡುವುದನ್ನು ತಡೆಯುವುದು ಮೊದಲ ಆದ್ಯತೆಯಾಗಬೇಕಿದೆ. ಲಸಿಕೆಯ ಅಂತಿಮ ಹಂತದ ಪ್ರಯೋಗಗಳು ಯಶಸ್ವಿಯಾಗಿ ವರ್ಷಾಂತ್ಯಕ್ಕೆ ಇಲ್ಲವೇ ಮುಂದಿನ ವರ್ಷ ಆರಂಭದ ವೇಳೆಗೆ ಸಾರ್ವಜನಿಕ ಬಳಕೆಗೆ ಸಿಗಲಿದೆ. ಈ ವರ್ಷವೇ ಲಸಿಕೆ ಸಿಗುವ ಸಾಧ್ಯತೆ ಇಲ್ಲವೆನ್ನಲಾಗಿದೆ.