ಕೇರಳದ ಬ್ಯಾಂಕುಗಳಲ್ಲಿ ಇದೇ ಮೊದಲ ಬಾರಿಗೆ 2 ಲಕ್ಷ ಕೋಟಿ (ಟ್ರಿಲಿಯನ್) ರೂ.ಗಳಷ್ಟು ನಿಶ್ಚಿತ ಠೇವಣಿ ಹೂಡಿಕೆಯಾಗಿದೆ. ಅದೂ ಅನಿವಾಸಿ ಭಾರತೀಯರಿಂದ ಎಂಬುದು ಗಮನಾರ್ಹ ಸಂಗತಿ.
ಕೊರೊನಾದಿಂದಾಗಿ ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕೊರೊನಾ ಬಾಧಿತ ದೇಶಗಳು ಸ್ವದೇಶಿಯರ ಅಗತ್ಯ ಪೂರೈಸುವುದಕ್ಕೇ ಹರಸಾಹಸ ಪಡುವಂತಾಗಿದೆ. ಹೀಗಾಗಿ ವಿದೇಶದಲ್ಲಿನ ಅನೇಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ದುಡಿದ ಶ್ರಮದ ಹಣವನ್ನು ಉಳಿತಾಯ ಮಾಡುವ ಯೋಜನೆಯಲ್ಲಿದ್ದಾರೆ.
ಇಷ್ಟು ದಿನ ದುಡಿದ ಹಣವನ್ನು ಊರಿನಲ್ಲಿ ನೆಲೆಸಿದ ತಮ್ಮವರಿಗಾಗಿ ಕಳುಹಿಸಿಕೊಡುತ್ತಿದ್ದರಲ್ಲದೆ, ಮನೆ, ಜಮೀನು ಸೇರಿದಂತೆ ಖರೀದಿಗೆ ಹೂಡಿಕೆ ಮಾಡುತ್ತಿದ್ದರು. ಆದರೆ, ಈ ಬಾರಿ ಅದೆಲ್ಲವನ್ನೂ ಬಿಟ್ಟು ತವರು ನೆಲದ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಸ್ವರೂಪದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆಯಲ್ಲಿ ಮಂಡನೆಯಾದ ವರದಿ ಪ್ರಕಾರ, ಕೇರಳದ ಬ್ಯಾಂಕುಗಳಲ್ಲಿ 2015 ರ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ಅನಿವಾಸಿ ಭಾರತಿಯರ ನಿಶ್ಚಿತ ಠೇವಣಿ ಪ್ರಮಾಣ 1 ಲಕ್ಷ ಕೋಟಿ ರೂ. ದಾಟಿತ್ತು.
ಈ ಬಾರಿ 2019 ರ ಡಿಸೆಂಬರ್ 31 ರ ವೇಳೆಗೇ 1,99,781 ಕೋಟಿ ರೂ. ದಾಟಿದ್ದು, 2018 ರ ಇದೇ ಸಂದರ್ಭಕ್ಕಿಂತ ಈ ವರ್ಷ ಶೇ.7.19 ರಷ್ಟು ಹೆಚ್ಚುವರಿ ಠೇವಣಿ ಜಮೆಯಾಗಿದೆ. ನಂತರ ಜನವರಿಯಿಂದ ಮಾರ್ಚ್ ಒಳಗಾಗಿ ಮೂರೇ ತಿಂಗಳಲ್ಲಿ 219 ಕೋಟಿ ರೂ. ತಲುಪಿದೆ. ಇದು ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದ್ದ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ತಾಯ್ನಾಡಿಗೆ ಬರಬಹುದಾದ ಮುನ್ಸೂಚನೆಯಂತಿದೆ.