ನವದೆಹಲಿ: 12 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ದೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಸ್ ರಾಕೆಟ್ ನಲ್ಲಿ ಕುಖ್ಯಾತಿ ಪಡೆದಿರುವ ಗೀತಾ ಅರೋರಾ ಅಲಿಯಾಸ್ ಸೋನು ಪಂಜಾಬನ್ ಗೆ ಕೋರ್ಟ್ 24 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ದೆಹಲಿಯ ದ್ವಾರಕಾ ಕೋರ್ಟ್ ನಲ್ಲಿ ವಿಚಾರಣೆ ನಡೆದು ಗೀತಾ ಅರೋರಾಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಆಕೆಯ ಸಹಚರನಾದ ಸಂದೀಪ್ ಬೆದವಾಲ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 2009ರಲ್ಲಿ 12 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದ ಸಂದೀಪ್ ಆಕೆಯ ಮೇಲೆ ಅತ್ಯಾಚಾರವೆಸಗಿ ಮಧ್ಯವರ್ತಿಯ ಮೂಲಕ ಗೀತಾ ಅರೋರಾಗೆ ಮಾರಾಟ ಮಾಡಿದ್ದ.
ಬಾಲಕಿಗೆ ಮಾದಕವಸ್ತು ನೀಡಿ ವೇಶ್ಯಾವಾಟಿಕೆಗೆ ಗೀತಾ ಬಳಸಿಕೊಂಡಿದ್ದು 2017 ರ ಡಿಸೆಂಬರ್ ನಲ್ಲಿ ಬಂಧಿಸಲಾಗಿತ್ತು. ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ 24 ವರ್ಷ ಜೈಲು ಶಿಕ್ಷೆ ವಿಧಿಸಿದೆ.