ನವದೆಹಲಿ: ರೈತರು ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಎರಡು ಸುಗ್ರೀವಾಜ್ಞೆಗಳ ಅಧಿಸೂಚನೆ ಹೊರಡಿಸಿದೆ.
ರೈತರು ಕೃಷಿ ಉತ್ಪನ್ನಗಳನ್ನು ಮಂಡಿಯಿಂದ ಹೊರಗೆ ಮಾರಾಟ ಮಾಡಬಹುದಾಗಿದೆ. ಬೆಳೆ ಬೆಳೆಯುವ ಮೊದಲೇ ಖಾಸಗಿಯವರೊಂದಿಗೆ ಕೃಷಿ ಉತ್ಪನ್ನ ಮಾರಾಟ, ಖರೀದಿಯ ಒಡಂಬಡಿಕೆ ಮಾಡಿಕೊಳ್ಳಬಹುದಾಗಿದೆ.
ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ -ಉತ್ತೇಜನ ಮತ್ತು ನೆರವು ಹಾಗೂ ಬೆಲೆ ಖಾತರಿ ಮತ್ತು ಬೇಸಾಯ ಸೇವೆಗಳ ಒಪ್ಪಂದ – ಸಬಲೀಕರಣ ಮತ್ತು ಸಂರಕ್ಷಣೆ ಸುಗ್ರೀವಾಜ್ಞೆಗಳನ್ನು 2020ರ ಜೂನ್ 5ರಂದು ಹೊರಡಿಸಲಾಗಿದ್ದು ಜುಲೈ 20ರಂದು ಅಧಿಸೂಚನೆ ಪ್ರಕಟಿಸಲಾಗಿದೆ.
ಎಲೆಕ್ಟ್ರಾನಿಕ್ ಟ್ರೇಡಿಂಗ್ ಮೂಲಕವೂ ರೈತರು ಕೃಷಿ ಉತ್ಪನ್ನ ಮಾರಾಟ ಮಾಡಬಹುದಾಗಿದೆ. ಕೃಷಿ ಉತ್ಪನ್ನ ಸಂಘಟನೆಗಳು ಮತ್ತು ಕೃಷಿ ಸಹಕಾರ ಸಂಸ್ಥೆಗಳು, ಖಾಸಗಿಯವರು ಇದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆ. ನಿಬಂಧನೆಗಳ ಉಲ್ಲಂಘನೆಗೆ 50 ಸಾವಿರ ರೂ.ನಿಂದ 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.
ರೈತರಿಂದ ಕೃಷಿ ಉತ್ಪನ್ನ ಖರೀದಿಸುವವರು ಅದೇ ದಿನ ಹಣ ಸಂದಾಯ ಮಾಡಬೇಕು. ಕೆಲವೊಂದು ಸಂದರ್ಭದಲ್ಲಿ ಮೂರು ಕೆಲಸದ ದಿನಗಳ ಒಳಗೆ ಹಣ ನೀಡಬೇಕು ಎಂದು ತಿಳಿಸಲಾಗಿದೆ. ಇನ್ನು ಅಧಿಸೂಚನೆಯಲ್ಲಿ ತಿಳಿಸಿರುವಂತೆ ರಾಜ್ಯಸರ್ಕಾರಗಳಿಗೆ ರೈತರ ಮೇಲೆ ಸುಂಕ, ವ್ಯಾಪಾರಸ್ಥರು, ಇ -ಟ್ರೇಡಿಂಗ್ ಮೇಲೆ ಯಾವುದೇ ತೆರಿಗೆಗೆ ಅವಕಾಶ ಇಲ್ಲ. ಮಾರುಕಟ್ಟೆ ಶುಲ್ಕ, ಸೆಸ್ ಹಾಕಲು ಅವಕಾಶವಿಲ್ಲವೆಂದು ಹೇಳಲಾಗಿದೆ