ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಆರ್ಭಟ ನಡೆಸುತ್ತಿದ್ದು, ಹೀಗಾಗಿ ರಾಜ್ಯ ಸರ್ಕಾರ, ಖಾಸಗಿ ಆಸ್ಪತ್ರೆಗಳು ಶೇಕಡಾ 50ರಷ್ಟು ಬೆಡ್ ಗಳನ್ನು ಬಿಟ್ಟುಕೊಡಬೇಕೆಂದು ತಾಕೀತು ಮಾಡಿದೆ.
ಹಲವು ದಿನಗಳ ಹಗ್ಗಜಗ್ಗಾಟದ ಬಳಿಕ ಖಾಸಗಿ ಆಸ್ಪತ್ರೆಗಳು ಇದಕ್ಕೆ ಸಮ್ಮತಿಸಿದ್ದು, ಇದರ ಮಧ್ಯೆ ಕೊರೊನಾ ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳು ಯದ್ವಾತದ್ವಾ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿತ್ತು.
ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಅಧಿಕ ದರವನ್ನು ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳ ಮಧ್ಯೆ, ಇದೀಗ ರಾಜ್ಯ ಸರ್ಕಾರ ಕೋವಿಡ್ ಪರೀಕ್ಷೆ ದರವನ್ನು ಕಡಿಮೆ ಮಾಡಿದ್ದು, ಸರ್ಕಾರದಿಂದ ಶಿಫಾರಸು ಮಾಡಿದ ರೋಗಿಗಳ ಪರೀಕ್ಷೆಗೆ 2 ಸಾವಿರ ರೂಪಾಯಿ ಹಾಗೂ ನೇರವಾಗಿ ಪರೀಕ್ಷೆ ಮಾಡಿಸುವವರಿಗೆ 3 ಸಾವಿರ ರೂಪಾಯಿ ದರ ನಿಗದಿ ಮಾಡಿದೆ.