ರಾಜಸ್ತಾನದಲ್ಲಿ ಎದುರಾಗಿರುವ ರಾಜಕೀಯ ಹೈಡ್ರಾಮಾ ಈಗ ನ್ಯಾಯಾಲಯದ ಮೆಟ್ಟಿಲೇರಿದೆ.
ವಿಪರ್ಯಾಸ ಎಂದರೆ ಹಿಂದೆ ಸರ್ಕಾರಿ ಬಂಗ್ಲೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಿಎಂ ವಸುಂಧರಾ ರಾಜೇ ಅವರನ್ನು
ಕಾಂಗ್ರೆಸ್ ಸರ್ಕಾರ ನ್ಯಾಯಾಲಯದಲ್ಲಿ ಬೆಂಬಲಿಸಿತ್ತು. ಈಗ ಉಪ ಮುಖ್ಯಮಂತ್ರಿ ಸ್ಥಾನದಿಂದ ಉಚ್ಚಾಟಿತ ಸಚಿನ್ ಪೈಲಟ್, ರಾಜೇ ಬೆಂಬಲದೊಂದಿಗೆ ನ್ಯಾಯಾಲಯ ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಮಾಜಿ ಸಿಎಂಗಳಿಗೆ ಸರ್ಕಾರಿ ಬಂಗ್ಲೆ ಹಾಗೂ ಸೌಲಭ್ಯ ನೀಡಬಾರದು ಎಂಬ ರಾಜಸ್ತಾನ ಹೈಕೋರ್ಟ್ ಆದೇಶವನ್ನು, ಸುಪ್ರೀಂ ಕೋರ್ಟ್ ಕಳೆದ ಜನವರಿಯಲ್ಲಿ ಎತ್ತಿ ಹಿಡಿದಿತ್ತು. ನಂತರ ಅಶೋಕ್ ಗೆಹ್ಲೊಟ್ ಅವರ ಕಾಂಗ್ರೆಸ್ ಸರ್ಕಾರ ಸ್ವಂತ ಪಕ್ಷದ ಮಾಜಿ ಸಿಎಂ ಜಗನ್ನಾಥ ಪಾಂಡ್ಯಾ ಅವರಿಗೆ ಸರ್ಕಾರಿ ಬಂಗ್ಲೆ ಖಾಲಿ ಮಾಡುವಂತೆ ನೋಟಿಸ್ ನೀಡಿ ಖಾಲಿ ಮಾಡಿಸಿತ್ತು. ಆದರೆ, ಬಿಜೆಪಿಯ ವಸುಂಧರಾ ರಾಜೆ ಅವರ ಬಂಗ್ಲೆ ತೆರವು ಮಾಡಿಸಿರಲಿಲ್ಲ. ಈ ಸಂಬಂಧ ಮಿಲಿಂದ್ ಚಂದ್ ದಾಂಡಿಯಾ ಎಂಬುವವರು ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿ, ಹೈಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದ ಸರ್ಕಾರ ರಾಜೆ ಅವರಿಗೆ ಸರ್ಕಾರಿ ಬಂಗ್ಲೆಯಲ್ಲಿ ಮುಂದುವರಿಯಲು ಅವಕಾಶ ನೀಡಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತ್ತು.
ರಾಜೆ ಅವರಿಗೆ ನೀಡಿದ ಕಾರು, ಸರ್ಕಾರಿ ಸಿಬ್ಬಂದಿಯನ್ನು ವಾಪಸ್ ಮಾಡಿದ್ದಾರೆ. ಅವರು ಎಂಎಲ್ಎ ಕೂಡ ಆಗಿರುವುದರಿಂದ ಸರ್ಕಾರಿ ಬಂಗ್ಲೆಯಲ್ಲಿ ಉಳಿಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಸರ್ಕಾರ ಹೇಳಿತ್ತು.