ಪ್ಲೋರಿಡಾ: ಕಡಲಿನಲ್ಲಿ ಬೃಹತ್ ಶಾರ್ಕ್ ನಿಂದ ಅಪಾಯಕ್ಕೆ ಸಿಲುಕಿದ ಬಾಲಕನನ್ನು ಪೊಲೀಸ್ ಅಧಿಕಾರಿಯೊಬ್ಬರು ಕಡಲಿಗೆ ಧುಮುಕಿ ರಕ್ಷಿಸಿದ್ದಾರೆ.
ಪ್ಲೋರಿಡಾದ ಕೊಕೊವಾ ಕಡಲ ತೀರದಲ್ಲಿ ಜು.16 ರಂದು ಘಟನೆ ನಡೆದಿದ್ದು, ಅದರ ವಿಡಿಯೋವನ್ನು ಕೊಕೊವಾ ಬೀಚ್ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ.
ರಜೆಯ ಮೇಲಿದ್ದ ಪೊಲೀಸ್ ಅಧಿಕಾರಿ ಎಂಡ್ರಿಮ್ ಕೋಸಿಕಿ ರಕ್ಷಣೆ ಮಾಡಿದವರು. ಅವರು ತಮ್ಮ ಪತ್ನಿಯ ಜತೆ ಕಡಲ ತೀರದಲ್ಲಿ ವಾಕಿಂಗ್ ಮಾಡುತ್ತಿದ್ದರು. ಬಾಲಕನೊಬ್ಬ ಗಾಳಿ ತುಂಬಿದ ಬಲೂನ್ ಮೇಲೆ ಕುಳಿತು ಸಮುದ್ರದ ನೀರಿನಲ್ಲಿ ಆಡುತ್ತಿದ್ದ ಆಗ ಸಮುದ್ರದಲ್ಲಿ ಶಾರ್ಕ್ ಒಂದು ಬಾಲಕನತ್ತ ಧಾವಿಸಿ ಬರುತ್ತಿರುವುದನ್ನು ಪೊಲೀಸ್ ಅಧಿಕಾರಿ ಗಮನಿಸಿದರು. ತಕ್ಷಣ ಸಮುದ್ರಕ್ಕೆ ಧುಮುಕಿ ಬಾಲಕನನ್ನು ದಡಕ್ಕೆ ಎಳೆತಂದಿದ್ದಾರೆ.
“ನಾವು ಕಡಲ ಜೀವ ಶಾಸ್ತ್ರಜ್ಞರಲ್ಲ. ಯಾವ ಮೀನು ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಓದಿಲ್ಲ. ಆದರೆ, ತಕ್ಷಣಕ್ಕೆ ಅಪಾಯ ಇದೆ ಎಂದು ತೋಚಿದಾಗ, ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ” ಎಂದು ಕೋಸಿಕಿ ಹೇಳಿದ್ದಾರೆ.
https://www.facebook.com/CocoaBeachPoliceFire/videos/602940080645147