ದೇಶದಲ್ಲಿರುವ ಬ್ಯಾಂಕುಗಳ ಸಂಖ್ಯೆಯನ್ನು ಇಳಿಕೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಹಲವು ಬ್ಯಾಂಕ್ ಗಳು ಹಾಗೂ ಬ್ಯಾಂಕ್ ಆಫ್ ಬರೋಡ ಜೊತೆ ಕೆಲ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. ಇದೀಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದ್ದು, ದೇಶದಲ್ಲಿ ನಾಲ್ಕರಿಂದ ಐದು ಮಾತ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಇರಬೇಕೆಂದು ನಿರ್ಧರಿಸಿದೆ.
ಹೀಗಾಗಿ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯುಕೋ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಪ್ರಸ್ತುತ 12 ರಾಜ್ಯ ಸ್ವಾಮ್ಯದ ಬ್ಯಾಂಕ್ ಗಳಿದ್ದು, ಇವುಗಳ ಸಂಖ್ಯೆಯನ್ನು ನಾಲ್ಕರಿಂದ ಐದಕ್ಕೆ ಸೀಮಿತಗೊಳಿಸುವುದು ಸರ್ಕಾರದ ಇರಾದೆಯಾಗಿದೆ.
ಪ್ರಮುಖ ಬ್ಯಾಂಕುಗಳು ಷೇರು ಮಾರಾಟಕ್ಕೆ ಈಗಾಗಲೇ ಪೂರಕ ಸಿದ್ಧತೆಗಳು ನಡೆಯುತ್ತಿದೆ ಎನ್ನಲಾಗಿದ್ದು, ಇದು ಅಂತಿಮಗೊಂಡ ಬಳಿಕ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆಗೊಳಪಡಲಿದೆ. ಬ್ಯಾಂಕುಗಳ ಖಾಸಗೀಕರಣ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇಂತಹುದೊಂದು ಬೆಳವಣಿಗೆ ನಡೆಯುತ್ತಿರುವುದು ಸತ್ಯ ಎಂದು ಉನ್ನತ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.